ಸುದ್ದಿಮೂಲ ವಾರ್ತೆ
ಯಾದಗಿರಿ,ಜೂ.11:ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾದ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಮಹಿಳಾ ಸಶಕ್ತೀರಣಕ್ಕೆ ವಿಶೇಷ ಒತ್ತನ್ನು ನೀಡಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪೂರ ಅವರು ಹೇಳಿದರು.
ಯಾದಗಿರಿ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳೆಯರಿಗೆ ಸರ್ಕಾರದ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ಮೂಲಕ ಸರ್ಕಾರ ಮಹಿಳೆಯರ ಸಶಕ್ತೀಕರಣ ಮತ್ತು ಸಬಲೀಕರಣಕ್ಕೆ ನೆರವಾಗಿದೆ. ಇಂದಿನಿಂದ ರಾಜ್ಯದಲ್ಲಿ ಹಾಗೂ ರಾಜ್ಯದ ಗಡಿಯ ಪಟ್ಟಣ ಹಾಗೂ ಗ್ರಾಮಗಳವರೆಗೆ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲಿದ್ದು, ಇಂದು ಇದಕ್ಕೆ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.
ಜನತೆಗೆ ಸರ್ಕಾರ ನೀಡಿದ ಭರವಸೆಯಂತೆ ಪ್ರಥಮ ಭರವಸೆಯಾದ’ ಶಕ್ತಿ’ ಯೋಜನೆಗೆ ಇಂದು ಅದ್ದೂರಿಯಾಗಿ ಚಾಲನೆ ನೀಡಲಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಕೂಡ ಬೆಂಗಳೂರಿನಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದು, ಸರ್ಕಾರವು ನುಡಿದಂತೆ ನಡೆದಿದೆ. ಈ ಯೋಜನೆ ಜಾರಿಗೆ ತರುವ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ಮಾಡಿದೆ. ಜಿಲ್ಲೆ ಯಲ್ಲಿ ಸುಮಾರು ಏಳು ಲಕ್ಷ ಮಹಿಳೆಯರಿದ್ದು, ಈವರೆಗೆ ಕಡಿಮೆ ಪ್ರಮಾಣದ ಮಹಿಳೆಯರು ಪ್ರಯಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಯೋಜನೆ ಜಾರಿಯಿಂದ ಎಲ್ಲ ಮಹಿಳೆಯರು ಹೆಚ್ಚಿನ ಲಾಭ ಪಡೆಯಬಹುದಾಗಿದ್ದು, ಸರ್ಕಾರ ಮಹಿಳೆಯರ ಆರ್ಥಿಕ ಭಾರ ಇಳಿಸುವ ಮಹತ್ವದ ಕಾರ್ಯ ಮಾಡಿದೆ ಎಂದು ಹೇಳಿದರು.
ಮುಂದಿನ ಮೂರು ತಿಂಗಳ ಅವಧಿಯಲ್ಲಿ ಮಹಿಳೆಯರು ‘ಶಕ್ತಿ’ ಸ್ಮಾರ್ಟ್ ಕಾರ್ಡ್ ಪಡೆದು ಸರ್ಕಾರಿ ಬಸ್ ಗಳಲ್ಲಿ ಸಂಚಾರ ಮಾಡಬೇಕು. ಈ ಅವಧಿಯಲ್ಲಿ ಸದ್ಯ ಗುರುತಿಗಾಗಿ ಆಧಾರ್ , ಮತದಾನ ಗುರುತಿನ ಚೀಟಿ, ಚಾಲನ ಪರವಾನಿಗೆ ಪತ್ರ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪಡೆದ ಯಾವುದಾದರೂ ಭಾವಚಿತ್ರವುಳ್ಳ ಗುರುತಿನ ಚೀಟಿ ತೋರಿಸುವ ಮೂಲಕ ಪ್ರಯಾಣದ ‘ಶೂನ್ಯ’ ಟಿಕೆಟ್ ಪಡೆದು ರಾಜ್ಯ ಮತ್ತು ರಾಜ್ಯದ ಗಡಿಯವರೆಗೆ ಬಸ್ ಸಂಚಾರ ಮಾಡಬಹುದಾಗಿದ್ದು, ಮಹಿಳೆಯರು ಇದರ ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು.
ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು ಮಾತನಾಡಿ, ರಾಜ್ಯದ ಗಡಿ ಭಾಗದ ಪಟ್ಟಣ, ಗ್ರಾಮದವರೆಗೆ ಮತ್ತು ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಮೂಲಕ ರಾಜ್ಯ ಸರ್ಕಾರ ತನ್ನ ಮಾತನ್ನು ಉಳಿಸಿಕೊಂಡಿದೆ. ಮಹಿಳೆಯರು ಮುಂಬರುವ ದಿನಗಳಲ್ಲಿ ಸೇವಾ ಸಿಂಧು ಮೂಲಕ ಅರ್ಜಿಯನ್ನು ಪಡೆದು ‘ಶಕ್ತಿ’ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳುವಂತೆ ತಿಳಿಸಿದ ಅವರು ಈ ಯೋಜನೆ ಸೇರಿದಂತೆ ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ ಯೋಜನೆ ಹಾಗೂ ಹತ್ತು ಕೆಜಿ ವರೆಗೆ ಪಡಿತರ ವಿತರಿಸುವಂತಹ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸುವ ಮೂಲಕ ಜನತೆಗೆ ನೀಡಿದ ಭರವಸೆ ಈಡೇರಿಸಿದೆ. ಮುಂಬರುವ ದಿನಗಳಲ್ಲಿ ಬಡವರ ಮತ್ತು ಜನಪರ ಯೋಜನೆಗಳು ಸಹ ಸರ್ಕಾರ ಜಾರಿಗೊಳಿಸಲಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಶ್ರೀಮತಿ ಸ್ನೇಹಲ್ ಆರ್. ಅವರು ಮಾತನಾಡಿ, ರಾಜ್ಯ ಸರ್ಕಾರದ ಶಕ್ತಿ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯದ ಮಹಿಳೆಯರು, ವಿದ್ಯಾರ್ಥಿನಿಯರು ಲಿಂಗತ್ವ ಅಲ್ಪಸಂಖ್ಯಾತರು ಸಹ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ, ಸಾಮಾನ್ಯ ವೇಗದೂತ ಮತ್ತು ತಡೆರಹಿತ ಸಾರಿಗೆಗಳಲ್ಲಿ ಮಾತ್ರ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿರುತ್ತದೆ ಎಂದರು.
ಐಷಾರಾಮಿ ಬಸ್ಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್, ಸಾರಿಗೆಗಳಲ್ಲಿ ಉಚಿತ ಪ್ರಯಾಣ ಅನ್ವಯಿಸುವುದಿಲ್ಲ. ಅಂತರ ರಾಜ್ಯ ಸಾರಿಗೆಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶವಿರುವುದಿಲ್ಲ ಆದರೆ ಯಾದಗಿರಿ ವಿಭಾಗದಿಂದ ಅಂತರ್ ರಾಜ್ಯ ಮತ್ತು ಎನ್ಕ್ಲೇವ್ ಮಾರ್ಗದ ಸಾರಿಗೆಗಳಲ್ಲಿ ಮಹಿಳಾ ಪ್ರಯಾಣಿಕರು ರಾಜ್ಯದ ಗಡಿಭಾಗದ ಪಟ್ಟಣ ಅಥವಾ ಗ್ರಾಮದವರೆಗೆ ಮಾತ್ರ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
ಶಹಾಪುರದಿಂದ ಮೀರಜ್, ರಾಯಚೂರಿನಿಂದ ಮೀರಜ್, ಯಾದಗಿರಿಯಿಂದ ಇಚಲಕಂಜಿ, ಗುರುಮಿಠಕಲ್ ದಿಂದ ಮಂತ್ರಾಲಯ, ಸೈದಾಪೂರದಿಂದ ನಾರಾಯಣಪೇಟ, ಯಾದಗಿರಿಯಿಂದ ನಾರಾಯಣಪೇಟ, ಗುರುಮಿಠಕಲ್ ನಿಂದ ನಾರಾಯಣಪೇಟ, ಗುರುಮಿಠಕಲ್ ನಿಂದ ಕೊಡಂಗಲ್, ಯಾದಗಿರಿಯಿಂದ ಸೈದಾಪೂರ ಮತ್ತು ರಾಯಚೂರ ಅಂತರ್ ರಾಜ್ಯ ಹಾಗೂ ಎನ್ಕಲೇವ್ ಮಾರ್ಗ ಗಳಲ್ಲಿ ಹಾಗೂ ಯಾದಗಿರಿ, ಶಹಾಪುರ, ಸುರಪುರ, ಗುರುಮಿಠಕಲ್ ಘಟಕಗಳಿಂದ ಬಳ್ಳಾರಿ, ಬೆಂಗಳೂರು ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ಸಾರಿಗೆಗಳಲ್ಲಿ ರಾಜ್ಯದ ಮಹಿಳೆಯರು ತಮ್ಮ ಭಾವಚಿತ್ರ ಇರುವ ಹಾಗೂ ಕರ್ನಾಟಕ ರಾಜ್ಯದ ವಾಸ ಸ್ಥಳ ನಮೂದಿಸಿರುವ ಯಾವುದಾದರೂ ಒಂದು ಮೂಲ ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಬಹುದಾಗಿದೆ ಎಂದು ಅವರು ನುಡಿದರು.
ಜಿಲ್ಲಾ ಉಸ್ತುವಾರಿ ಸಚಿವರು ಇಂದು ಬಸ್ ಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಪ್ರಯಾಣದ ಪ್ರಥಮ ಮಹಿಳಾ ಟಿಕೆಟ್ ಪಡೆದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರೀಮಾ ಪನ್ವಾರ್, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಶಾ ಆಲಂ ಹುಸೇನ್, ಜಿಲ್ಲಾ ಸಂಚಾಲನಾಧಿಕಾರಿ ರಮೇಶ ಪಾಟೀಲ್, ಡಿವೈಎಸ್ಪಿ ಬಸವೇಶ್ವರ, ವಿಭಾಗೀಯ ತಾಂತ್ರಿಕ ಶಿಲ್ಪಿ ಪ್ರಶಾಂತ ಸುರಪುರ, ಉಪಮುಖ್ಯ ತಾಂತ್ರಿಕ ಶಿಲ್ಪಿ ಪುರಾಣಿಕ ಹಾಗೂ ಇತರರು ಉಪಸ್ಥಿತರಿದ್ದರು.