ಸುದ್ದಿಮೂಲ ವಾರ್ತೆ
ರಾಮನಗರ, ಜೂ 11 : ಶಕ್ತಿ ಯೋಜನೆಗೆ ರಾಮನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮತ್ತು ಶಾಸಕ ಇಕ್ಬಾಲ್ ಹುಸೇನ್ ಅನುಪಸ್ಥಿತಿಯಲ್ಲಿ ಚಾಲನೆ ದೊರೆಯಿತು.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಆಯೋಜನೆಯಾಗಿದ್ದ ಉದ್ಘಾಟನಾ ವೇದಿಕೆಯ ಬ್ಯಾನರ್ನಲ್ಲಿ ಶಾಸಕರು ಮತ್ತು ಸಂಸದರ ಫೋಟೋ ಇಲ್ಲದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಡಿಸಿದ್ದರಿಂದ ಒಂದೂವರೆ ಗಂಟೆ ತಡವಾಗಿ ಕಾರ್ಯಕ್ರಮ ಆರಂಭವಾಯಿತು.
ಚುನಾಯಿತ ಪ್ರತಿನಿಧಿಗಳ ಗೈರುಹಾಜರಿಯಲ್ಲಿ ವಿಧಾನ ಪರಿಷತ್ನ ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ ಮಹಿಳಾ ಪ್ರಯಾಣಿಕರಿಗೆ ಶೂನ್ಯ ದರ ಟಿಕೆಟ್ ನೀಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ನಗರಸಭಾಧ್ಯಕ್ಷೆ ಬಿ.ಕೆ.ಪವಿತ್ರ, ಉಪಾಧ್ಯಕ್ಷ ಸೋಮಶೇಖರ್ (ಮಣಿ), ಜಿಲ್ಲಾಧಿಕಾರ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಎಸ್ಪಿ ಕಾರ್ತಿಕ್ ರೆಡ್ಡಿ, ತಹಶೀಲ್ದಾರ್ ತೇಜಸ್ವಿನಿ, ನಗರಸಭಾ ಸದಸ್ಯ ಕೆ.ಶೇಷಾದ್ರಿ (ಶಶಿ), ಮಾಜಿ ಅಧ್ಯಕ್ಷ ಬಿ.ಸಿ.ಪಾವರ್ತಮ್ಮ, ಮಾಜಿ ಶಾಸಕ ಕೆ.ರಾಜು, ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಕಾಂಗ್ರೆಸ್ ಪ್ರಮುಖರಾದ ಕೆ.ರಮೇಶ್, ವಿ.ಎಚ್.ರಾಜು ಮುಂತಾದವರು ಹಾಜರಿದ್ದರು.
ಮಾಜಿಗಳದ್ದೇ ಕಾರುಬಾರು!
ಹಾಲಿ ಚುನಾಯಿತ ಪ್ರತಿನಿಧಿಗಳು ಗೈರಾಗಿದ್ದರಿಂದ ಮಾಜಿ ಪ್ರತಿನಿಧಿಗಳೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿತನಕ್ಕೆ ಸಿಕ್ಕ ಅವಕಾಶ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕರಿಗೆ ಸಮಜಾಯಿಷಿ ನೀಡಿದರು.
ಆಕ್ರೋಶ
ಶಾಸಕ ಇಕ್ಬಾಲ್ ಹುಸೇನ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರುಗಳ ಭಾವಚಿತ್ರ ಇಲ್ಲದ್ದನ್ನು ಕಂಡ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತದನಂತರ ಜಿಲ್ಲೆಯ ಶಾಸಕರಾದ ಎಚ್.ಡಿ.ಕುಮಾರಸ್ವಾಮಿ, ಎಚ್.ಎ.ಇಕ್ಬಾಲ್ ಹುಸೇನ್ ಮತ್ತು ಎಚ್.ಸಿ.ಬಾಲಕೃಷ್ಣ ಅವರ ಭಾವಚಿತ್ರಗಳನ್ನು ಒಳಗೊಂಡ ಬ್ಯಾನರ್ ಅಳವಡಿಕೆ ನಂತರ ಚಾಲನೆ ದೊರೆಯಿತು.
ಮಹಿಳಾ ಪ್ರಯಾಣಿಕರು ಖುಷ್!
ತಹಶೀಲ್ದಾರ್ ತೇಜಸ್ವಿನಿ ಹಾಗೂ ರಾಮನಗರ ನಗರಸಭೆಯ ಮಾಜಿ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಅವರು ಉಚಿತ ಟಿಕೆಟ್ ಪಡೆದರು. ಉಚಿತ ಟಿಕೆಟ್ ಪಡೆದ ಮಹಿಳೆಯರು ಪ್ರಯಾಣ ದರ ತಲಾ 45 ರೂ ಉಳಿತಾಯವಾಯಿತು ಎಂದು ಖುಷಿ ವ್ಯಕ್ತಪಡಿಸಿದರು.
ರಾಮನಗರದಲ್ಲಿ ಶಕ್ತಿ ಯೋಜನೆಯಡಿ ಕೆಎಸ್ಸಾರ್ಟಿಸಿ ಟಿಕೆಟ್ ಪಡೆದುಕೊಂಡ ತಹಶೀಲ್ದಾರ್ ತೇಜಸ್ವಿನಿ ಮತ್ತು ನಗರಸಭೆ ಮಾಜಿ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ.
ರಾಮನಗರದಲ್ಲಿ ಶಕ್ತಿ ಯೋಜನೆಗೆ ಚಾಲನೆ ದೊರೆತ ವೇಳೆ ವಿಧಾನಪರಿಷತ್ ಮಾಜಿ ಸದಸ್ಯ ಸಿ.ಎಂ.ಲಿಂಗಪ್ಪ, ನಗರಸಭೆ ಅಧ್ಯಕ್ಷ ಬಿ.ಕೆ.ಪವಿತ್ರ, ಡೀಸಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಎಸ್ಪಿ ಕಾರ್ತಿಕ್ ರೆಡ್ಡಿ ಮತ್ತು ಇತರರು ಹಾಜರಿದ್ದರು.