ಸುದ್ದಿಮೂಲ ವಾರ್ತೆ
ತಿಪಟೂರು, ಜೂ 12 : ನೇಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ನೇಕಾರರ
ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟರ್ಕಿ ಹಾಗೂ ಮುಖಂಡರುಗಳು ಶಾಸಕ ಕೆ. ಷಡಕ್ಷರಿ ನಿವಾಸಕ್ಕೆ ಭೇಟಿ ನೀಡಿ ಮುಖ್ಯಮಂತ್ರಿಗಳ ಗಮನಕ್ಕೆ ತರುವಂತೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಶಿವಲಿಂಗ ಟರ್ಕಿ, ರಾಜ್ಯದಲ್ಲಿ 55 ರಿಂದ 60 ಲಕ್ಷ ನೇಕಾರರಿದ್ದು, ವೃತ್ತಿಪರ ನೇಕಾರಿಕೆಯಲ್ಲಿ 5 ರಿಂದ 6 ಲಕ್ಷ ಜನ ತೊಡಗಿಕೊಂಡಿದ್ದು, ಸರ್ಕಾರ
ಕೊಡಮಾಡುವ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ. ಬರಗಾಲ, ನೆರೆಹಾವಳಿ,
ಅತಿವೃಷ್ಟಿ, ನೋಟ್ಬ್ಯಾನ್, ಜಿಎಸ್ಟಿ ಹಾಗೂ ಕೋವಿಡ್-19 ಲಾಕ್ಡೌನ್ ನಂತರ ಸಾಕಷ್ಟು ನೇಕಾರಿಕೆ ಮೇಲೆ ಹೆಚ್ಚು ದುಷ್ಪರಿಣಾಮಗಳನ್ನುಂಟು ಮಾಡಿವೆ.
ಶಿಕ್ಷಣ, ಕುಟುಂಬದ ಆರೋಗ್ಯಕ್ಕಾಗಿ ಅಭದ್ರತೆಯಲ್ಲಿರುವ ನೇಕಾರಿಕೆಯನ್ನು ಮುಂದುವರೆಸಬೇಕಿದ್ದು, ಮಾರುಕಟ್ಟೆಯ ಸಾಲದ ಹೊರೆಯಲ್ಲಿ ಸಿಲುಕಿ ಅನೇಕ ವೃತ್ತಿಪರ ನೇಕಾರರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ರಾಜ್ಯದ ನೇಕಾರರ ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಒಳಗೊಂಡಂತೆ ಸಂಪೂರ್ಣ ಸಾಲಮನ್ನಾ ಮಾಡಬೇಕು.
ರಾಜ್ಯ ಸರ್ಕಾರ ಘೊಷಿಸಿದಂತೆ 10 ಎಚ್.ಪಿವರೆಗೆ ಉಚಿತ ವಿದ್ಯುತ್ ಜಾರಿ ಮಾಡುವ ಮೂಲಕ ನೇಕಾರರ ಹಿತ ಕಾಯಬೇಕಿದೆ. ನೇಕಾರರಿಗೆ ವಿದ್ಯುತ್ ಬಿಲ್ ಹೆಚ್ಚಳ
ಮಿನಿಮಮ್ ಚಾರ್ಚ್ ಹೆಚ್ಚಳವಾಗಿದ್ದು ಇದನ್ನು ತುರ್ತಾಗಿ ತಡೆಹಿಡಿದು 10 ಎಚ್ಪಿ ವರೆಗೆ ವಿದ್ಯುತ್ ಜಾರಿ ಮಾಡಿ ನೇಕಾರಿಕೆ ವೃತ್ತಿಯಲ್ಲಿ ಮುಂದುವರೆಯಲು ಅನುವು ಮಾಡಿಕೊಡಬೇಕಿದೆ.
ರಾಜ್ಯದ ವೃತ್ತಿಪರ ನೇಕಾರರ ಹಕ್ಕೋತ್ತಾಯಗಳಿಗಾಗಿ ನೇಕಾರರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದರು.
ರಾಜ್ಯ ನೇಕಾರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಹೆಚ್.ಎಸ್. ಲೋಕೇಶ್ ಹಳೇಪಾಳ್ಯ ಮಾತನಾಡಿ, ವೃತ್ತಿಪರ ನೇಕಾರರಿಗೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಕಾರ್ಮಿಕ ಸೌಲಭ್ಯಗಳನ್ನು ಜಾರಿ ಮಾಡಬೇಕು.
ನೇಕಾರರ ಉತ್ಪಾದನೆಗಳಿಗೆ ಸರ್ಕಾರ ನೇರ ಮಾರುಕಟ್ಟೆಗೆ ಮಾರಾಟ ಮಳಿಗೆಗಳನ್ನು ಕಲ್ಪಿಸಬೇಕು. ಈಗಾಗಲೇ ಇರುವ ನೇಕಾರ ಸಮ್ಮಾನ ಯೋಜನೆ, ವಿದ್ಯಾರ್ಥಿ ವೇತನವನ್ನು ಎಲ್ಲಾ ನೇಕಾರರಿಗೆ ತಲುವಂತಾಗಬೇಕು. ಜವಳಿ
ಮಹಾವಿದ್ಯಾಲಯಗಳನ್ನು ಸ್ಥಾಪಿಸಬೇಕು ಹಾಗೂ ಸಾಯಂಕಾಲ ಓದುವ ವಿದ್ಯಾರ್ಥಿಗಳಿಗೆ ರಾತ್ರಿ ಕಾಲೇಜುಗಳನ್ನು ಪ್ರಾರಂಬಿಸಿ ಅನುಕೂಲ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಸ್. ಚಂದ್ರಶೇಖರ್, ನೇಕಾರಮುಖಂಡರುಗಳಾದ ವಿ.ತಿಮ್ಮರಾಜ್, ಯತೀಶ್, ಗಿರೀಶ್, ಅಕ್ಷಯ್ಕುಮಾರ್, ದರ್ಶನ ಮತ್ತಿತರರಿದ್ದರು.
ತಿಪಟೂರಿನಲ್ಲಿ ಶಾಸಕ ಕೆ. ಷಡಕ್ಷರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ರಾಜ್ಯ ನೇಕಾರರ ಸೇವಾ
ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟರ್ಕಿ ಹಾಗೂ ಮುಖಂಡರುಗಳು.