ಗ್ಯಾರಂಟಿಗಳಿಗೆ ಎಷ್ಟು ಸಾಲ ಮಾಡ್ತೀರಾ ? ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನೆ
ಸುದ್ದಿಮೂಲ ವಾರ್ತೆ
ಮೈಸೂರು, ಜೂ. 13 : ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಲು ಹೆಚ್ಚುವರಿ ತೆರಿಗೆ ಎಷ್ಟು ಹಾಕ್ತೀರಾ? ಎಷ್ಟು ಸಾಲ ಮಾಡುತ್ತೀರಾ? ಎಂಬುದನ್ನು ಮೊದಲು ತಿಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಹಣಕಾಸಿನ ಸ್ಥಿತಿ ಹೇಗಿದೆ?, ಎಷ್ಟು ಸಾಲವಿದೆ? ಈ ಎಲ್ಲದರ ಬಗ್ಗೆಯೂ ಯೋಚಿಸಿ ಯೋಜನೆ ಘೋಷಣೆ ಮಾಡಬೇಕು. ಕಾಂಗ್ರೆಸ್ ಓಟಿಗಾಗಿ ಗ್ಯಾರಂಟಿ ಘೋಷಣೆ ಮಾಡಿದೆ. ಹಣವನ್ನು ಹೇಗೆ ಹೊಂದಿಸುತ್ತಾರೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಆಗ ಇಲ್ಲದ ಕಂಡೀಷನ್ ಹೀಗೇಕೆ ?
ಗ್ಯಾರಂಟಿ ಯೋಜನೆಗಳಿಗೆ ಚುನಾವಣೆ ವೇಳೆ ಕಂಡಿಷನ್ ಗಳು ಇರಲಿಲ್ಲ. ಈಗ ಷರತ್ತು ಹಾಕ್ತಿದ್ದಾರೆ ರಾಜ್ಯದಲ್ಲಿ ಎಲ್ಲಾ ಮನೆಗಳಿಗೆ ಹೆಚ್ಚು ವಿದ್ಯುತ್ ಬಿಲ್ ಬರುತ್ತಿದೆ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವುದು ಸಾಮಾಜಿಕ ನ್ಯಾಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.