ಸುದ್ದಿಮೂಲ ವಾರ್ತೆ
ಮೈಸೂರು, ಜೂ.13 : ಎಲೆಮರೆ ಕಾಯಿಯಂತೆ ಸಾಹಿತ್ಯ ಮತ್ತು ಪತ್ರಿಕಾ ಕ್ಷೇತ್ರದಲ್ಲಿ ಬದ್ದತೆಯಿಂದ ತೊಡಗಿಸಿಕೊಂಡಿದ್ದ ಟಿ.ಎಸ್. ರಾಮಸ್ವಾಮಿ (69) ಅವರು ಮಂಗಳವಾರ ಮಂಜಾನೆ ನಗರದ ಸರಸ್ವತಿಪುರಂನಲ್ಲಿ ಇರುವ ನಿವಾಸದಲ್ಲಿ ನಿಧನರಾದರು.
ಸ್ಥಳೀಯ ಆಂದೋಲನ ಪತ್ರಿಕೆ ಪುರವಾಣಿ ಸಂಚಿಕೆ ಹಾಡುಪಾಡುವಿನ ಮೂಲಕ ಸಾಹಿತ್ಯ ಮತ್ತು ಸಾಮಾಜಿಕ ಆಗುಹೋಗುಗಳ ಬಗ್ಗೆ ಸಾಹಿತ್ಯದ ನೆಲೆಯಲ್ಲಿಯೇ ಬಿಂಬಿಸುವ ಮೂಲಕ ಮೆರಗು ನೀಡಿದ್ದರು.
ರಾಮು ಅವರ ಗರಡಿಯಲ್ಲಿ ಬೆಳೆದ ಪರ್ತಕರ್ತರು ರಾಜ್ಯಾದ್ಯಂತ ಇದ್ದಾರೆ. ಕವಿಯೂ ಆಗಿದ್ದ ಅವರು ʻಅಗ್ನಿಸೂಕ್ತʼ ಕವನ ಸಂಕಲವನ್ನು ಬರೆದಿದ್ದಾರೆ. ಜ್ಞಾನ ಪ್ರದರ್ಶನಕ್ಕೆ ಇಳಿಯದೆ ನಾಡಿನ ಲೇಖಕರು, ಚಿಂತಕರ ಸಾಕ್ಷಿಪ್ರಜ್ಷೆಯಂತೆ ಇದ್ದರು. ,ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೆ ಅತ್ಯಾಪ್ತರಾಗಿದ್ದ ಅವರು, ಪುಣೆ ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು.
ಗಣ್ಯರ ಕಂಬನಿ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಖ್ಯಾತ ಸಾಹಿತಿ ದೇವನೂರ ಮಹದೇವ, ಜಿ.ಪಿ.ಬಸವರಾಜು, ವನ್ಯಜೀವಿ ತಜ್ಷರಾದ ಕೃಪಾಕರ, ಸೇನಾನಿ, ಕಾಡಾ ಮಾಜಿ ಅಧ್ಯಕ್ಷ ದೇವನೂರು ಶಿವಮಲ್ಲು, ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್, ಆಂದೋಲನ ಪತ್ರಿಕೆ ಸಂಪಾದಕ ರವಿಕೋಟಿ, ಕಾಳಚನ್ನೇಗೌಡ, ಮೈಸೂರು ವಿವಿ ಮಾಜಿ ಸೆನೆಟ್ ಸದಸ್ಯ ಗೋಪಿನಾಥ್, ರಂಗಭೂಮಿ ಕಲಾವಿದರಾದ ಪ್ರಸಾದ್ ಕುಂದೂರು, ಸುಗುಣ, ದೀಪಕ್, ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಂ, ಲೋಕೇಸ್ ಮೊಸಳೆ, ಪತ್ರಕರ್ತರಾದ ಹರೀಶ್ ಮಹೇಂದ್ರ, ಚಿನ್ನಸ್ವಾಮಿ ವಡ್ಡಗೆರೆ, ಶ್ರೀಧರ್ ಭಟ್,ಓಂಕಾರ್ , ಕೆ.ಪಿ. ಮಹದೇವ, ಬೇಲೂರು ವಿಜಯಕುಮಾರ್ ಸೇರಿದಂತೆ ಹಲವಾರ ಮಂದಿ ಅಂತಿಮ ನಮನ ಸಲ್ಲಿಸಿದರು.