ಸುದ್ದಿಮೂಲ ವಾರ್ತೆ
ತಿಪಟೂರು, ಜೂ 14, : ಇತ್ತೀಚೆಗೆ ಕುಣಿಗಲ್ನ ಕೃಷಿ ಸಂಶೋಧನ ಕೇಂದ್ರದಲ್ಲಿ ಪೂರ್ವ ಮುಂಗಾರು ತಾಂತ್ರಿಕ ಆಂದೋಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೃಷಿ ವಿಶ್ವವಿದ್ಯಾನಿಲಯದ ಸಹಾಯಕ ಕೃಷಿ ನಿರ್ದೇಶಕರಾದ ಡಾ. ಎಂ. ಎಸ್.ಉಮಾ ಕಾರ್ಯಕ್ರಮ ಉದ್ಘಾಟಿಸಿದರು.
ಬೆಂಗಳೂರು ಕೃಷಿ ಸಂಶೋಧನ ಕೇಂದ್ರ, ತಿಪಟೂರು ಹಾಗೂ ಕುಣಿಗಲ್ ಕೃಷಿ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಐ.ಡಿ.ಎಫ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರೈತರು ಪೂರ್ವ ಮುಂಗಾರಿನ ಸಮಯದಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳು ಹಾಗೂ ಸುಧಾರಿತ ತಳಿಗಳ ಲಭ್ಯತೆಯ ಮಾಹಿತಿ ನೀಡಲಾಯಿತು.
ತಾಲ್ಲೂಕಿನ ಸಹಾಯಕ ಕೃಷಿ ಅಧಿಕಾರಿಗಳಾದ ನೂರ್ಆಜಂ, ರೈತರು ಆಧುನಿಕವಾಗಿ ಅಭಿವೃದ್ಧಿ ಪಡಿಸಿದ ಸುಧಾರಿತ ತಳಿಗಳು ಹಾಗೂ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು
ಬೇಸಾಯದ ಖರ್ಚನ್ನು ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ಉತ್ತಮ ಆದಾಯವನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
ಐ.ಡಿ.ಎಫ್ ಸಂಸ್ಥೆಯ ಯೋಜನಾಧಿಕಾರಿ ಕೆಂಪೇಗೌಡ, ಸಾವಯವ ಮತ್ತು ಸುಸ್ಥಿರ ಕೃಷಿಯ ಕುರಿತು ತಾಂತ್ರಿಕ ಮಾಹಿತಿ ನೀಡಿ, ಕಡಿಮೆ ಪೈರನ್ನು ಶಿಫಾರಸ್ಸು ಮಾಡಿದ ಅಂತರದಲ್ಲಿ ನಾಟಿ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು ಎಂದರು.
ತಿಪಟೂರಿನ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕರಾದ ಡಾ.ಯೋಗೀಶ್, ಜಿಲ್ಲೆಯಲ್ಲಿರಾಗಿ ಮುಖ್ಯ ಆಹಾರ ಬೆಳೆಯಾಗಿದ್ದು, ರೈತರು ಬೆಂಕಿ ರೋಗಕ್ಕೆ ತುತ್ತಾಗುವ ತಳಿಗಳನ್ನು ಏಕ ಬೆಳೆಯಾಗಿ ಉಪಯೋಗಿಸುತ್ತಿದ್ದು, ಇದಕ್ಕೆ ಪೂರಕವಾಗಿ ಕಡಿಮೆ ಅವಧಿಯ ಅಲಸಂಧೆ ಹಾಗೂ ರಾಗಿ ಬೆಳೆಯುವುದರಿಂದ ಬೈ ಮಾಡುಲಿಕ್ ಮಳೆಯ ಪ್ರಯೋಜನವನ್ನು ಪಡೆಯಬಹುದು ಎಂದರು.
ಹಿರಿಯ ವಿಜ್ಞಾನಿ, ಡಾ. ವಿ.ಗೋವಿಂದಗೌಡರು ಮಾತನಾಡಿ ಒಂದೇ ಸಮನೆ ಏರುತ್ತಿರುವ ತಾಪಾಮಾನ ಹಾಗೂ ಬದಲಾಗುತ್ತಿರುವ ವಾತಾವರಣಕ್ಕೆ ಅನುಗುಣವಾಗಿ ಸರಿಯಾಗಿ ಹವಮಾನ ಚತುರ ಕೃಷಿ ಪದ್ಧತಿಗಳನ್ನು ಅನುಸರಿಸುವುದರಿಂದ ಕೃಷಿಯಲ್ಲಿ ಉತ್ತಮ ಆಧಾಯವನ್ನು ಪಡೆಯಬಹುದು ಎಂದರು.
ರಾಷ್ಟ್ರೀಯ ಸಹಾಯಕ ಬೀಜೋತ್ಪಾದನಾ ಅಧಿಕಾರಿ, ಡಾ. ಬಸವರಾಜ್, ಮುಂಗಾರು ಹಂಗಾಮಿಗೆ ಸೂಕ್ತವಾದ ತಳಿಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಿಕರಾದ ಡಾ. ಶ್ರೀನಿವಾಸ್, ಕೀಟ ಮತ್ತು ರೋಗಗಳನ್ನು ಸಮಗ್ರವಾಗಿ ಹತೋಟಿಗೆ ತರುವ ವಿಧಾನ ತಿಳಿಸಿದರು.
ಕಾರ್ಯಕ್ರಮದಲ್ಲಿ ನೂತನ ತಂತ್ರಜ್ಞಾನ ಹಾಗೂ ನೂತನ ತಳಿಗಳ ಪ್ರದರ್ಶನ ಹಾಗೂ ಮಾರಾಟವನ್ನು ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.
ಕೃಷಿ ವಿಶ್ವವಿದ್ಯಾನಿಲಯದ ಸಹಾಯಕ ಕೃಷಿ ನಿರ್ದೇಶಕರಾದ ಡಾ.ಎಂ. ಎಸ್. ಉಮಾ ಉದ್ಘಾಟಿಸಿ ಮಾತನಾಡುತ್ತಿರುವುದು.