ಸುದ್ದಿಮೂಲ ವಾರ್ತೆ
ಕುಷ್ಟಗಿ, ಜೂ. 14:ಸರ್ಕಾರಿ ಶಾಲಾ ಕಟ್ಟಡ ಉಳಿಸಿ ನಮ್ಮ ಮಕ್ಕಳ ಭಿಕ್ಷಾಟನೆ ತಪ್ಪಿಸಿ ಎಂದು ಅಲೆಮಾರಿ ಜನಾಂಗದ ಪ್ರಮುಖ ಮಹಬೂಬಸಾಬ ಹಾವಾಡಿಗ ಸಂಸದ ಕರಡಿ ಸಂಗಣ್ಣ, ಶಾಸಕ ದೊಡ್ಡನಗೌಡ ಪಾಟೀಲ್, ರೈಲ್ವೆ ಇಲಾಖೆಯ ಅಧಿಕಾರಿಗಳ ಮುಂದೆ ಅಂಗಲಾಚಿದ ಪ್ರಸಂಗ ಪಟ್ಟಣದಲ್ಲಿ ಬುಧವಾರ ನಡೆಯಿತು.
ಸಂಸದ ಸಂಗಣ್ಣ ಕರಡಿ ಅವರು ಕುಷ್ಟಗಿ ಪಟ್ಟಣದ ಷರೀಫ್ ನಗರದ ಬಳಿ ರೈಲ್ವೇ ಸ್ಟೇಷನ್ ಕಾಮಗಾರಿ ವೀಕ್ಷಣೆಗೆ ಬಂದ ಸಂದರ್ಭದಲ್ಲಿ ಅಲೆಮಾರಿ ಜನಾಂಗದ ಮಕ್ಕಳು ಶಿಕ್ಷಣದಿಂದ ವಂಚಿತರಾದರೆ ಮತ್ತೆ ಭಿಕ್ಷಾಟನೆಗೆ ಇಳಿಯುತ್ತಾರೆ.
ರೈಲ್ವೇ ಹಳಿಗೆ ನಮ್ಮ ಮನೆಗಳೆಲ್ಲಾ ಹೋದರೂ ಚಿಂತೆಯಿಲ್ಲ. ಆದರೆ, ಶಾಲಾ ಕಟ್ಟಡ ತೆರವುಗೊಳಿಸಲು ಬಿಡುವುದಿಲ್ಲ. ಕೆಲ ದಿನಗಳ ಹಿಂದೆ ತಹಸೀಲ್ದಾರ್ ರಾಘವೇಂದ್ರರಾವ್ ಕರ್ಣಂ ಅವರು ಷರೀಫ ನಗರದ ಶಾಲೆಗೆ ಬಂದು ವೀಕ್ಷಿಸಿದ್ದಾರೆ. ಆ ವೇಳೆ ರೈಲ್ವೆ ಇಲಾಖೆ ಇಂಜಿನಿಯರ್’ಗಳು ಶಾಲೆಯ ಕಟ್ಟಡ ಬದಲು ಶಾಲೆಯ ತಡೆಗೋಡೆ ಒಂದು ಭಾಗ ಮಾತ್ರ ತೆರವುಗೊಳಿಸುವುದಾಗಿ ಹೇಳಿದ್ದಾರೆ ಎಂದು ಮಹಬೂಬಸಾಬ ಸಂಸದರ ಗಮನಕ್ಕೆ ತಂದರು. ಆಗ ರೈಲ್ವೇ ಪ್ರಾಧಿಕಾರದ ಅಧಿಕಾರಿಗಳು ಸಂಪೂರ್ಣ ಶಾಲೆ ತೆರವುಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಶಾಸಕ ದೊಡ್ಡನಗೌಡರ ಗಮನಕ್ಕೆ ತಂದರೆ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡುತ್ತಾರೆ ಎಂದು ಸಂಸದ ಸಂಗಣ್ಣ ತಿಳಿಸಿದರು. ಆಗ ಮಹಬೂಬಸಾಬ ಪ್ರತಿಕ್ರಿಯಿಸಿ, ಈ ಹಿಂದೆ ದೊಡ್ಡನಗೌಡರು ಶಾಸಕರಿದ್ದ ಅವಧಿಯಲ್ಲಿ ನಾಲ್ಕೈದು ಬಾರಿ ಮನವಿ ಮಾಡಿದ್ದೇನೆ. ಅಂದಿನ ವಾರ್ಡ ಸದಸ್ಯ ನಾಗರಾಜ ಮೇಲಿನಮನಿ ಗಮನಕ್ಕೂ ಇದೆ ಎಂದ ಮಹಬೂಬಸಾಬ, ಆಕ್ರೋಶಭರಿತನಾಗಿ ಶಾಲೆ ತೆಗೆಯಿರಿ, ಮನೆ ತೆಗೆಯಿರಿ, ನಮ್ಮ ಪ್ರಾಣನೂ ತೆಗೆಯಿರಿ. ಆದರೆ, ನಮ್ಮ ಮಕ್ಕಳ ಭಿಕ್ಷಾಟನೆ ತಪ್ಪಿಸಿ, ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ ಎಂದು ಮತ್ತೊಮ್ಮೆ ಅಂಗಲಾಚಿ ಬೇಡಿಕೊಂಡರು.
ಸಂಸದ ಕರಡಿ ಸಂಗಣ್ಣ ಪ್ರತಿಕ್ರಿಯಿಸಿ, ಕೂಡಲೇ ಶಾಲಾ ಕಟ್ಟಡಕ್ಕೆ ಬಿಡುಗಡೆಗೊಂಡ ಪರಿಹಾರವನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವ ವ್ಯವಸ್ಥೆ ಆಗಬೇಕು. ಜೊತೆಗೆ ಶಾಸಕರ ಮಾರ್ಗದರ್ಶನದಲ್ಲಿ ಷರೀಫ್ ನಗರ ಸಮೀಪದಲ್ಲೇ ಸರ್ಕಾರಿ ಜಾಗೆಯನ್ನು ಗುರುತಿಸಿ ಅಲ್ಲಿ ಪರ್ಯಾಯ ಶಾಲಾ ಕಟ್ಟಡ ನಿರ್ಮಿಸಲು ಕೈಗೊಳ್ಳಬೇಕು. ಅಲಮಾರಿ ಮಕ್ಕಳು ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ತಹಸೀಲ್ದಾರ್ ರಾಘವೇಂದ್ರರಾವ್ ಕೆ. ಅವರಿಗೆ ಸೂಚಿಸಿದರು.
ಈ ವೇಳೆ ಶಾಸಕ ದೊಡ್ಡನಗೌಡ ಪಾಟೀಲ್, ತಹಸೀಲ್ದಾರ್ ರಾಘವೇಂದ್ರರಾವ್ ಕರ್ಣಂ, ರೈಲ್ವೆ ಇಲಾಖೆಯ ಅಧಿಕಾರಿಗಳು, ಬಿಜೆಪಿ ಪ್ರಮುಖರಾದ ಪ್ರಭಾಕರ ಚಿಣಿ, ಕೆ.ಮಹೇಶ್, ಪುರಸಭೆ ಸದಸ್ಯ ಜಿ.ಕೆ.ಹಿರೇಮಠ, ಮಾಜಿ ಸದಸ್ಯರಾದ ನಾಗರಾಜ ಮೇಲಿನಮನಿ, ಚಂದ್ರಕಾಂತ ವಡಿಗೇರಿ ಇತರರು ಹಾಜರಿದ್ದರು.