ಸುದ್ದಿಮೂಲ ವಾರ್ತೆ
ಕುಷ್ಟಗಿ, ಜೂ. 14: ತಾಲೂಕಿನ ತಾವರಗೇರಾ ಪಟ್ಟಣದ ಜೆಸ್ಕಾಂ ಶಾಖಾಧಿಕಾರಿ ರಶ್ಮಿ ಅವರು ಸಿಬ್ಬಂದಿ ಕೊರತೆ ಹಿನ್ನೆಲೆ ತಮ್ಮ ಕಚೇರಿ ಮುಂಭಾಗದಲ್ಲಿ ಆರಂಭಿಸಿದ್ದ ಪ್ರತಿಭಟನೆನಿರತ ಮಾರ್ಗದಾಳು ಸಿಬ್ಬಂದಿ ಸಮ್ಮುಖದಲ್ಲಿಯೇ ಕಣ್ಣೀರು ಹಾಕಿ ಅಸಹಾಯಕತೆ ವ್ಯಕ್ತಪಡಿಸಿದ ಪ್ರಸಂಗ ಜರುಗಿದೆ.
ತಮ್ಮ ಶಾಖೆಯ ವ್ಯಾಪ್ತಿಗೊಳಪಡುವ 48 ಗ್ರಾಮಗಳಲ್ಲಿ ವಿದ್ಯುತ್ ಕಾಮಗಾರಿ ನಿರ್ವಹಣೆಗೆ 12 ಜನ ಮಾರ್ಗದಾಳು ಸಿಬ್ಬಂದಿ ಅಗತ್ಯವಿದೆ. ಆದರೆ, ಸದ್ಯ ಕೇವಲ 7 ಜನ ಮಾರ್ಗದಾಳು ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾವರಗೇರಾ ಪಟ್ಟಣದಲ್ಲಿ ಕಾರ್ಯನಿರ್ವಹಿಸಲು 4 ಜನ ಮಾರ್ಗದಾಳು ಸಿಬ್ಬಂದಿ ಅವಶ್ಯಕತೆ ಇರುತ್ತದೆ. ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರು ಕೂಡಾ ರಜೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಖಾಧಿಕಾರಿ ರಶ್ಮಿ ಅವರು ಬೇಸರ ವ್ಯಕ್ತಪಡಿಸಿದರು.
ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಮೇಲಾಧಿಕಾರಿಗಳಿಗೆ ಹಲವು ಪತ್ರ ಬರೆದು ಮನವಿ ಮಾಡಿದಾಗ್ಯೂ ಕ್ರಮಕೈಗೊಂಡಿಲ್ಲ. ಹೀಗಾಗಿ ಸದ್ಯ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಒತ್ತಾಯಿಸಿ ಸಿಬ್ಬಂದಿಯೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಶಾಖಾಧಿಕಾರಿ ರಶ್ಮಿ ಅವರು ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.