ರೈತರಿಗೆ ಮಾರಕವಾದ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯಲು-ರೈತ ಸಂಘ ಒತ್ತಾಯ
ಸುದ್ದಿಮೂಲ ವಾರ್ತೆ
ಬಳ್ಳಾರಿ,ಜೂ.15: ದೇಶಕ್ಕೆ ಅನ್ನ ನೀಡುವ ರೈತರಿಗೆ ಮಾರಕವಾದ ಎಪಿಎಂಸಿ ಕಾಯ್ದೆ, ಭೂಸ್ವಾಧೀನ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರಬಂಧಕ ಹಾಗೂ ಸಂರಕ್ಷಣಾ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ದ ಜಿಲ್ಲಾ ಸಮೀತಿ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಸಂಡೂರು ಸೇರಿದಂತೆ ಜಿಲ್ಲೆಯ ನಾನಾ ಕಡೆಯಿಂದ ಆಗಮಿಸಿದ ರೈತರು, ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ನಂತರ ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟೆ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರವನ್ನು ರವಾನಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್.ಕೆ.ನಾಯ್ಡು ಅವರು ಮಾತನಾಡಿ, ರೈತರಿಗೆ ಮಾರಕವಾದ ಎಪಿಎಂಸಿ ಕಾಯ್ದೆ, ಭೂಸ್ವಾಧೀನ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರಬಂಧಕ ಹಾಗೂ ಸಂರಕ್ಷಣಾ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು, ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ಅಧಿಕಾರ ನೀಡಬೇಕು, ರೈತ ಪರ ನೀತಿಗಳನ್ನು ರೂಪಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಆಳುವ ಸರ್ಕಾರಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಇಲ್ಲಿವರೆಗೆ ಕ್ರಮವಿಲ್ಲ. ಊಳುವವನೇ ಒಡೆಯ ಎನ್ನುವ ಮಹತ್ವಕಾಂಕ್ಷಿ ಯೋಜನೆಗೆ ಬಿಜೆಪಿ ಸರ್ಕಾರ ರೈತರಿಗೆ ಕೊಡಲಿ ಪೆಟ್ಟು ನೀಡಿದೆ. ಅದರ ಬದಲು ಉಳ್ಳವನೇ ಭೂ ಒಡೆಯನನ್ನಾಗಿ ಮಾಡಲು ಕೇಂದ್ರದ ಬಿಜೆಪಿ ಸರ್ಕಾರ ಭೂ ಸುಧಾರಣಾ ಕಾಯ್ದೆಯ ಮೂಲ ಉದ್ದೇಶವನ್ನು ಹಾಳು ಮಾಡಿದೆ.
ರೈತರ ಪರ ಜನಪರ ಕಾಯಕ್ರಮಗಳನ್ನು ತರುವುದನ್ನು ಬಿಟ್ಟು ರೈತರಿಗೆ ಮಾರಕವಾದ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಕಾರ್ಪೊರೇಟ್ ಕಂಪನಿಗಳ ಪರವಾಗಿ ಸರ್ಕಾರ ನಿಂತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣಾ ಪೂರ್ವ ನೀಡಿದ 5 ಗ್ಯಾರಂಟಿಗಳನ್ನು ಜಾರಿಗೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ, ರೈತರಿಗೆ ಅನುಕೂಲಕರವಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು, ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರಿಗೆ ನೀಡಿದ ಭರವಸೆಗಳಂತೆ, ಕೂಡಲೇ ರೈತರಿಗೆ ಮಾರಕವಾಗಿರುವ ಮೂರು ಕಾಯ್ದೆಗಳನ್ನು ಹಿಂಪಡೆಯಬೇಕು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಮೂರು ಕಾಯ್ದೆಗಳನ್ನು ರದ್ದುಗೊಳಿಸುವ ಎಂದು ಘೋಷಣೆ ಮಾಡಿದ್ದು, ಅದರಂತೆ ಸರ್ಕಾರ ನಡೆದುಕೊಳ್ಳುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ನುಡಿದಂತೆ ನಡೆಯುವ ವಿಸ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಜೆ.ಸಿದ್ರಾಮನಗೌಡ, ಉಪಾಧ್ಯಕ್ಷರಾದ ದಿವಾಕರ್, ವಿರುಪಾಕ್ಷಿ, ಖಜಾಂಚಿ ಜಿ.ನಾಗರಾಜ್, ಮುಖಂಡರಾದ ಕೊಟೇಶ್ ರೆಡ್ಡಿ, ದೊಡ್ಡ ಬಸಪ್ಪ, ಎಂ.ವಿಜಯಕುಮಾರ್ ಕರ್ಚಿಗನೂರ್, ದೊಡ್ಡಪ್ಪ ಬನ್ನಿಹಟ್ಟಿ, ರಮೇಶ್, ಪ್ರಕಾಶಸ್ವಾಮೀ, ಮಹೇಶ್ ರೆಡ್ಡಿ ಇತರರಿದ್ದರು.