ಬೆಂಗಳೂರು, ಜೂ.15: ಕಾಂಗ್ರೆಸ್ ಸರಕಾರಕ್ಕೆ ಇಚ್ಛಾಶಕ್ತಿ ಕೊರತೆ ಇದೆ. ಹಣಕಾಸಿನ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ರಾಜಕಾರಣ ಮಾಡುತ್ತಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಡಿ ಕೇಂದ್ರವು 10 ಕೆಜಿ ಕೊಡಬೇಕೆಂಬ ಬಗ್ಗೆ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿ ನೋಡಿದ್ದೇವೆ. ಅದನ್ನು ನೋಡಿದಾಗ ರಾಜ್ಯದ ಕಾಂಗ್ರೆಸ್ ಸರಕಾರ 10 ಕೆಜಿ ಅಕ್ಕಿ ವಿಚಾರದಲ್ಲಿ ಮೋಸ ಮಾಡುತ್ತಿರುವುದು ಸ್ಪಷ್ಟಗೊಂಡಿದೆ. ಮಾತು ತಪ್ಪಿದ ದೋಖಾ ಕಾರ್ಯಕ್ರಮ ಮುಂದುವರಿಸಿದ್ದಾರೆ. ಅದನ್ನು ಮುಚ್ಚಿ ಹಾಕಲು ರೈತರ, ಬಡವರ ಬಿಪಿಎಲ್ ಕಾರ್ಡ್ದಾರರ ಆಪಾದನೆಯಿಂದ ಪಾರಾಗಲು ಅಕ್ಕಿ ಸರಬರಾಜು ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಖಂಡಿಸಿದರು.
ಕೇಂದ್ರ ಸರಕಾರವು ಆಹಾರ ಭದ್ರತಾ ಕಾಯ್ದೆ ಪ್ರಕಾರ ಎಲ್ಲ ರಾಜ್ಯಗಳಿಗೆ 5 ಕೆಜಿ ಅಕ್ಕಿ ಕೊಡುತ್ತಿದೆ. ಡಿಸೆಂಬರ್ನಲ್ಲಿ ನಿರ್ವಹಣೆ- ಸಾರಿಗೆ ವೆಚ್ಚವನ್ನೂ ನೀಡಲಾರಂಭಿಸಿದೆ. ಮೊದಲು ಇವೆರಡನ್ನು (ಸುಮಾರು 3 ರೂ.) ರಾಜ್ಯವೇ ಭರಿಸಬೇಕಾಗಿತ್ತು. 10 ಕೆಜಿ ಪೈಕಿ 5 ಕೆಜಿ ಕೇಂದ್ರದ ನರೇಂದ್ರ ಮೋದಿ ಸರಕಾರವೇ ನೀಡುತ್ತಿದೆ. ಆದರೆ, ಇದನ್ನು ಮುಚ್ಚಿಟ್ಟು ತಾವೇ ಕೊಡುತ್ತಿರುವುದಾಗಿ ಬಿಂಬಿಸಲು ರಾಜ್ಯದ ಕಾಂಗ್ರೆಸ್ ಸರಕಾರ ಮುಂದಾಗಿತ್ತು ಎಂದು ಟೀಕಿಸಿದರು.
2 ವರ್ಷ ಕೇಂದ್ರ- ರಾಜ್ಯ ಸರಕಾರ ಸೇರಿ ಡಿಸೆಂಬರ್ ವರೆಗೆ 10 ಕೆಜಿ ಕೊಟ್ಟಿದ್ದೆವು ಎಂದ ಅವರು, ಕಾಂಗ್ರೆಸ್ ಸರಕಾರದ ಮೊದಲ ಸಂಪುಟ ಸಭೆಯಲ್ಲಿ ಈ ಸರಕಾರ ತಾತ್ವಿಕವಾಗಿ 5 ಗ್ಯಾರಂಟಿಗಳಿಗೆ ಮಂಜೂರಾತಿ ಕೊಡಲಾಗಿತ್ತು. ಸರಣಿ ಸಭೆಗಳನ್ನೂ ನಡೆಸಿದ್ದರು. ಟೆಂಡರ್ ಕರೆದು ಅಕ್ಕಿ ಪಡೆಯಬೇಕಿತ್ತಲ್ಲವೇ? ಕುಂಟು ನೆಪ ಹೇಳುವುದೇ ನಿಮ್ಮ ಕ್ರಮವಲ್ಲವೇ? ಎಂದು ಪ್ರಶ್ನಿಸಿದರು.
ಅಕ್ಕಿ ಕೋರಿಕೆ ವಿನಂತಿಸಲು ಕೇಂದ್ರದ ಸಚಿವರ ಬಳಿಗೆ ನಿಮ್ಮ ಸಚಿವರನ್ನು ಕಳಿಸಬೇಕಿತ್ತಲ್ಲವೇ? ಎಫ್ಸಿಐಗೆ ಪತ್ರ ಬರೆದೊಡನೆ ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಸಿಎಂ ಅವರು ರಾಜಕೀಯ ಮಾಡುತ್ತಿರುವುದು ಅವರ ಹುದ್ದೆಗೆ ತಕ್ಕುದಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಸರಕಾರ ಪಡಿತರ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಮುಕ್ತ ಮಾರುಕಟ್ಟೆ, ಎಫ್ಸಿಐ ಸೇರಿ ಇತರ ಕಡೆಗಳಿಂದ ಅಕ್ಕಿ ಖರೀದಿಸಿ ವಿತರಿಸಿ. ಪ್ರತಿ ವ್ಯಕ್ತಿಗೆ 10 ಕೆಜಿ ಕೊಡಿ. ಇಲ್ಲವಾದರೆ ಹಣವನ್ನು ಡಿಬಿಟಿ ಮಾಡಿ ಎಂದು ಒತ್ತಾಯಿಸಿದರು. ಎಲ್ಲದರಲ್ಲೂ ಕಂಡಿಷನ್ ಗಮನಿಸಿದ ಜನತೆ, ಇದು ಗ್ಯಾರಂಟಿ ಅಲ್ಲ ದೋಖಾ ಸೀರೀಸ್ ಎನ್ನುತ್ತಾರೆ ಎಂದು ತಿಳಿಸಿದರು.
ವಿದ್ಯುತ್ ದರ ಏರಿಕೆಗೆ ನಾವು ಒಪ್ಪಿಕೊಂಡಿರಲಿಲ್ಲ. ಮೇ 12ರಂದು ಕೆಇಆರ್ಸಿ ನೋಟಿಫಿಕೇಶನ್ ಹೊರಡಿಸಿದೆ. ಅದು ನಮ್ಮ ಸರಕಾರದ ಕ್ರಮವಲ್ಲ ಎಂದು ತಿಳಿಸಿದರಲ್ಲದೆ, ಜೂನ್ 2ರಂದು ಆದೇಶ ಹೊರಡಿಸಲಾಗಿದೆ. ಆಗ ಯಾವ ಸರಕಾರ ಇತ್ತು ಎಂದು ಪ್ರಶ್ನಿಸಿದರು. ಏಪ್ರಿಲ್ನಿಂದ ಪೂರ್ವಾನ್ವಯವಾಗಿ ಇದು ಜಾರಿಯಾಗಿದೆ ಎಂದರು.
ರಾಜ್ಯ ಸರಕಾರ ಸುಳ್ಳು ಹೇಳುತ್ತಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಖಂಡಿಸಿದರು. ಜೂನ್ ತಿಂಗಳಿನಲ್ಲಿ 10 ಕೆಜಿ ಕೊಡದಿದ್ದರೆ ಜನರೊಂದಿಗೆ ಸೇರಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಗೋವಿಂದ ಕಾರಜೋಳ, ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಸಂಸದ ಈರಣ್ಣ ಕಡಾಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.