ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಜೂ.15 : ಜಾತ್ರೆಗಳು ಆಯಾಯ ಊರಿನ ಹಾಗೂ ಗ್ರಾಮಗಳಒಂದು ಪ್ರಮುಖ ಪರಂಪರೆ. ನೂರಾರು ವರ್ಷಗಳಿಂದ ಹಿರಿಯರು ನಡೆಸಿಕೊಂಡು ಬರುವ ನಂಬಿಕೆಯ ಹಬ್ಬ. ಅಕ್ಕ ಪಕ್ಕದ, ಸುತ್ತಮುತ್ತಲಿನ ಗ್ರಾಮಗಳ, ಊರಿನ ಜನರು ಒಂದೆಡೆ ಸೇರಿ ಸಂಭ್ರಮಿಸುವ ಆಚರಣೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಯಲಿಯೂರು ಗ್ರಾಮದಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಪರಂಪರೆಯಂತೆ ಪೂಜೆ- ಉತ್ಸವಗಳು ನಡೆಯತ್ತವೆ. ಇಲ್ಲಿನ ವೀರಣ್ಣ ದೇವರಿನ ಜಾತ್ರೆಯನ್ನು ಅತೀ ವಿಜೃಂಭಣೆಯಿಂದ ನಡೆಸಲಾಗುತ್ತದೆ. .ಈ ಜಾತ್ರೆಗೆ ಸುತ್ತ ಮುತ್ತಲಿನ ಗ್ರಾಮಸ್ಥರು ಬಂದು ಪದ್ಧತಿಯಂತೆ ಪೂಜೆಗಳನ್ನು ನಡೆಸುತ್ತಾರೆ. ಆದರೆ, ಐದು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆ ಕಾರಣಾಂತರಗಳಿಂದ 20 ವರ್ಷಗಳ ನಡೆದಿರಲಿಲ್ಲ. ಇದೀಗ ಸಮಯ ಕೂಡಿಬಂದು ಜಾತ್ರೆ ಅದ್ಧೂರಿಯಾಗಿ ನಡೆದಿದೆ.
ಯಲಿಯೂರು ಗ್ರಾಮ ಪಂಚಾಯತಿ ವ್ಯಾಪ್ತಿಯ 7 ಗ್ರಾಮಗಳಲ್ಲಿ ಈ ಜಾತ್ರೆಯನ್ನು ಆಚರಿಸಿದ್ದು, ಪ್ರತಿ ಮನೆ ಮನೆಯಲ್ಲಿಯೂ ಹಬ್ಬದ ವಾತವರಣವಿತ್ತು. ಇಡೀ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೀಪಾಲಂಕಾರ ಹಾಗೂ ಕೆಲವರು ತಮ್ಮ ಮನೆಗಳಿಗೂ ದೀಪದ ಅಲಂಕಾರ ಮಾಡಿಸಿಕೊಂಡಿದ್ದರು. ಮನೆಗಳಲ್ಲಿ ತಂಬಿಟ್ಟು ಮತ್ತು ಹೂವಿನ ದೀಪಗಳನ್ನು ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ವೀರಣ್ಣ ದೇವರಿಗೆ ಹೂವಿನ ದೀಪ ಬೆಳಗುವ ಮೂಲಕ ಹೆಣ್ಣುಮಕ್ಕಳು ಸಂಭ್ರಮಪಟ್ಟರು. ಜಾತ್ರೆ ಅಂಗವಾಗಿ ತಮ್ಮ ಸಂಬಂಧಿಕರುಗಳಿಗೆ ಔತಣ ಕೂಟವನ್ನು ಸಹ ಆಯೋಜಿಸಿದ್ದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಮಾತನಾಡಿ, ಸುಮಾರು 20 ವರ್ಷಗಳ ಹಿಂದೆ ನಡೆದಿದ್ದ ಈ ವೀರಣ್ಣ ಜಾತ್ರಾ ಮಹೋತ್ಸವ, ಈ ಬಾರಿ ನಡೆದಿರುವುದು ಸಂತಸದ ಕ್ಷಣವಾಗಿದೆ. ಗ್ರಾಮದಲ್ಲಿ ಸಡಗರ – ಸಂಭ್ರಮ ಮನೆ ಮಾಡಿದೆ. ಈ ಬಾರಿ ಜಾತ್ರೆ ಯಶಸ್ವಿಯಾಗಿದ್ದು, ಮುಂದೆಯೂ ಸಂಪ್ರದಾಯದಂತೆ ಕಾಲ ಕಾಲಕ್ಕೆ ಜಾತ್ರಾ ಮಹೋತ್ಸವ ನಡೆಯಲಿದೆ ಎಂದರು.
ವೀರಣ್ಣ ಜಾತ್ರೆಯೂ ಏಳು ಗ್ರಾಮಗಳ ಗ್ರಾಮಸ್ಥರು ಒಟ್ಟಾಗಿ ಸೇರಿ ಆಚರಿಸುವ ಮಹೋತ್ಸವ.
ಯಲಿಯೂರು, ತಮ್ಮೆನಹಳ್ಳಿ,ಚಿಕ್ಕರಾಮನಹಳ್ಳಿ,ಕೊಮ್ಮಸಂದ್ರ, ಅಳಿಯೂರು, ದೊಡ್ಡತತ್ತಮಂಗಲ,ಚಿಕ್ಕತತ್ತಮಂಗಲ ಗ್ರಾಮಗಳು ಒಟ್ಟಾಗಿ ಸೇರಿ ವೀರಣ್ಣ, ಪಟಾಲಮ್ಮ,ಕರಗದಮ್ಮ ಮಾರಮ್ಮ ಆಚರಣೆ ಮಾಡುವುದು ಸಂಪ್ರದಾಯ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು. ಯಶಸ್ವಿಯಾಗಿ ನಡೆಸಿದ ಏಳು ಗ್ರಾಮಗಳ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು.