ಸುದ್ದಿಮೂಲ ವಾರ್ತೆ
ಮೈಸೂರು, ಜೂ.16:ಹಿರಿಯ ರಾಜಕಾರಣಿ ಆಗಿರುವ ನೀವು ಜಿ. ಪರಮೇಶ್ವರ್ ಅವರನ್ನು ಮುಗಿಸಿ ಸಿಎಂ ಆದ್ರಾಲ್ಲ ಆ ರೀತಿಯ ಪ್ರಬುದ್ಧತೆ ನನಗೆ ಬೇಕಿಲ್ಲ ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ ಅವರು ತಮ್ಮನ್ನು ಎಳಸು ಎಂದು ಟೀಕಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಜೀವನದಲ್ಲಿ ಮುಂದೆ ಬರಲು ಸಹಕರಿಸಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಗ್ಗೆ ಅಗೌರವವಾಗಿ ಮಾತನಾಡುವುದು ನಿಮ್ಮ ಪ್ರಬುದ್ಧತೆ ಅನ್ನುವುದಾದರೆ, ಅದು ನನಗೆ ಬೇಡ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಡಿಕೆಶಿ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಡಿಕೆ ವಿರುದ್ಧ ಎಂ.ಬಿ ಪಾಟೀಲ್ ಅವರನ್ನ ಎತ್ತಿಕಟ್ಟುವ ಕೆಲಸ ಮಾಡಿದ್ದೀರ. ಇಂಹದ್ದನ್ನೆಲ್ಲಾ ಪ್ರಬುದ್ಧತೆ ಎನ್ನುವುದಾದರೆ ಇದ್ಯಾವ್ಯೂದು ನಮಗೆ ಬೇಡ ಸ್ವಾಮಿ ಎಂದು ಸಿದ್ದರಾಮಯ್ಯ ಅವರನ್ನು ಕುಟುಕಿದರು.
ಸಿದ್ದರಾಮಯ್ಯ ನನ್ನನ್ನು ಎಳಸು ಎಂದರು ಬೇಸರವಿಲ್ಲ. ಆದರೆ, ನಾನು ಕೇಳಿದ ಪ್ರಶ್ನೆಗಳಿಗೇಕೆ ಉತ್ತರ ನೀಡುತ್ತಿಲ್ಲ. ನೀವು ಬುದ್ದಿವಂತರಿದ್ದೀರಿ, ರಾಜ್ಯದ ಹಣಕಾಸು ವ್ಯವಸ್ಥೆ ತಿಳಿದಿರುವ ನೀವು ಹೇಗೆ ಗ್ಯಾರಂಟಿ ಘೋಷಣೆ ಮಾಡಿದ್ರಿ.?
ನನ್ನನ್ನ ಚೈಲ್ಡ್ ಅಂತಾನೆ ಕರಿಯಿರಿ ಬೇಜಾರ್ ಇಲ್ಲ. ಆದರೆ ರಾಜ್ಯದಲ್ಲಿ ಸಂಪನ್ಮೂಲ ಕ್ರೋಡೀಕರಣ ಮಾಡುವುದು ಹೇಗೆ ತಿಳಿಸಿ ? ಎಂದು ಪ್ರಶ್ನಿಸಿದರು.
ಜಾಗೃತಿ ಕಾರ್ಯಕ್ರಮ
ಪ್ರಧಾನಿ ಮೋದಿ ಅವರು ಕೊಟ್ಟಿರುವ 9 ವರ್ಷಗಳ ಯೋಜನೆಗಳ ಕುರಿತು ಒಂದು ತಿಂಗಳು ಜಾಗೃತಿ ಮೂಡಿಸಲಾಗುವುದು.ಜೂನ್ 22ರಂದು ಕಾರ್ಯಕರ್ತರ ಸಭೆ ನಡೆಯಲಿದೆ. ರಾಜ್ಯದ ಪ್ರಮುಖ ನಾಯಕರು ಬರಲಿದ್ದಾರೆ .ಮೈಸೂರು ಭಾಗಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ನೇಮಕ ಮಾಡಿದ್ದಾರೆ.
ಮೈಸೂರಿಗೆ ಮೋದಿ ಅವರು ರೈಲ್ವೆ, ವಿಮಾನ, ರಸ್ತೆ ನಿರ್ಮಾಣ ಕಾರ್ಯಗಳಿಗೆ ನೀಡಿರುವ ಕೊಡುಗೆಗಳ ಕುರಿತು ಜಾಗೃತಿ ಮೂಡಿಸಲಾಗುವದು ಎಂದು ತಿಳಿಸಿದರು.