ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.16:’ಗೃಹ ಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯ ಬಯಸುವವರು ಆಧಾರ್ ಸಂಖ್ಯೆಯನ್ನು ಸೇವಾಸಿಂಧು ಪೋರ್ಟಲ್ನಲ್ಲಿ ಜೋಡಣೆ ಮಾಡಿ ನೋಂದಾಯಿಸುವುದನ್ನು ಕಡ್ಡಾಯಗೊಳಿಸಿ ಇಂಧನ ಇಲಾಖೆ ಆದೇಶ ಹೊರಡಿಸಿದೆ.
ಈ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸುವ ಸಂಬಂಧ ಎಸ್ಕಾಂಗಳು ಪ್ರಸ್ತಾಪಿಸಿರುವ ಗೊಂದಲಗಳ ಬಗ್ಗೆ ಇಲಾಖೆ ಸ್ಪಷ್ಟೀಕರಣವನ್ನೂ ಒದಗಿಸಿದೆ. ಮುಖ್ಯವಾಗಿ ಬಾಡಿಗೆದಾರರು ವಾಸದ ಮನೆಯ ವಿಳಾಸಕ್ಕೆ ಸಂಬಂಧಿಸಿದಂತೆ ಆಧಾರ್ ಸಂಖ್ಯೆಯನ್ನು ಸೇವಾಸಿಂಧು ಪೋರ್ಟಲ್ನಲ್ಲಿ ಜೋಡಣೆ ಮಾಡಿ ನೋಂದಾಯಿಸಿ ಸೌಲಭ್ಯ ಪಡೆಯಬಹುದು.
200 ಯೂನಿಟ್ ಬಳಕೆ ಮಿತಿಯನ್ನು ಯಾವುದಾದರೂ ತಿಂಗಳಲ್ಲಿ ಮೀರಿದ್ದರೆ ಆ ತಿಂಗಳ ಪೂರ್ಣ ವಿದ್ಯುತ್ ಬಿಲ್ ಪಾವತಿಸಿ ಯೋಜನೆಯಡಿ ಮುಂದುವರೆಯಬಹುದು. ಹೊಸ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ಹಾಗೂ ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ ವಿದ್ಯುತ್ ಬಳಸಿದ ಗ್ರಾಹಕರಿಗೆ ರಾಜ್ಯದ ಗೃಹ ಬಳಕೆದಾರರು ಸರಾಸರಿ ಬಳಕೆಯ ಪ್ರಮಾಣವಾದ ಮಾಸಿಕ 53 ಯೂನಿಟ್ಗಳನ್ನು ಗೊತ್ತುಪಡಿಸಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಇಲಾಖೆ ಸ್ಪಷ್ಟನೆ ನೀಡಿದೆ.
ಚಿಕ್ಕಮಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಧನ ಖಾತೆ ಸಚಿವ ಕೆ.ಜೆ ಜಾರ್ಜ್, ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯನ್ನು ಜುಲೈ 1 ರಿಂದ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಯೋಜನೆಯಲ್ಲಿ 200 ಯುನಿಟ್ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಸಾರ್ವಜನಿಕರು ಈ ತಿಂಗಳ 18 ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯದಲ್ಲಿ ಸುಮಾರು 2 ಕೋಟಿ 16 ಲಕ್ಷ ಕುಟುಂಬಗಳಿಗೆ ಯೋಜನೆಯ ಲಾಭ ಸಿಗಲಿದೆ ಎಂದ ಅವರು, 12 ತಿಂಗಳ ವಿದ್ಯುತ್ ಬಳಕೆಯ ಸರಾಸರಿ ಪ್ರಮಾಣವನ್ನು ಪರಿಗಣಿಸಿ ಈ ಯೋಜನೆಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ವಿದ್ಯುತ್ ದರ ಏರಿಕೆ ಕುರಿತು ಸ್ಪಷ್ಠನೆ ನೀಡಿದ ಸಚಿವರು, ರಾಜ್ಯ ಸರ್ಕಾರ ದರ ಏರಿಕೆ ಮಾಡಿಲ್ಲ. ಬೆಲೆ ಏರಿಕೆ ದರ ಅಧಿಕಾರ ಕೆ.ಇ.ಆರ್.ಸಿ ಸಂಸ್ಥೆಗೆ ಇದ್ದು, ಯುನಿಟ್ಗೆ 70 ಪೈಸೆ ಏರಿಕೆ ಮಾಡಿದೆ ಅಲ್ಲದೆ ದರ ಏರಿಕೆಯನ್ನು ಮೇ 12 ರಿಂದ ಜಾರಿಗೊಳಿಸಿದೆ. ಏಪ್ರಿಲ್ ತಿಂಗಳಿನಿಂದ ಬಾಕಿ ಇದ್ದ ವಿದ್ಯುತ್ ದರವನ್ನು ಸೇರಿಸಿಕೊಂಡು ಬಿಲ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ದರ ಏರಿಕೆಯಿಂದ ಸಣ್ಣ ಕೈಗಾರಿಕೋದ್ಯಮಿಗಳಿಗೆ, ಕಾರ್ಖಾನೆಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.