ತಿಪಟೂರು ತಾಲ್ಲೂಕು ನುರಿತ ಯುವ ಜನತೆಯ ಕೇಂದ್ರವಾಗಿ ಹೊರಹೊಮ್ಮಲು ಯುವಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರ ಒಂದು ಅದ್ಭುತ ವೇದಿಕೆ – ಸಿ. ಬಿ ಶಶಿಧರ್ (ಟೂಡಾ)
ತಿಪಟೂರು: ಶಿಕ್ಷಣದಿಂದ ಮಾತ್ರ ಉದ್ಯೋಗ ಸಿಗುವುದಿಲ್ಲ ಸ್ಪರ್ಧಾತ್ಮಕ ಯುಗದಲ್ಲಿ ಆರ್ಥಿಕವಾಗಿ ಸದೃಢರಾಗಲು ಹೆಚ್ಚಿನ ಕೌಶಲ್ಯ ಅಗತ್ಯವಿದ್ದು, ವಿವಿಧ ವಿಭಾಗಗಳಲ್ಲಿ ಪ್ರೋತ್ಸಾಹ ಮತ್ತು ತರಬೇತಿ ನೀಡಿ ತಿಪಟೂರು ತಾಲ್ಲೂಕು ನುರಿತ ಯುವ ಜನತೆಯ ಕೇಂದ್ರವಾಗಿ ಹೊರಹೊಮ್ಮಬೇಕು ಎಂಬ ಸಂಕಲ್ಪದೊಂದಿಗೆ ಉದ್ಯೋಗ ಸೃಷ್ಟಿಗಾಗಿ ನುರಿತ ತರಬೇತುದಾರರಿಂದ ತರಬೇತಿ ನೀಡಲು ಯುವಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರವನ್ನು ಪ್ರಾರಂಭಿಸುತ್ತಿದ್ದೇನೆ ಎಂದು ಸಿ.ಬಿ. ಶಶಿಧರ್ (ಟೂಡಾ) ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 16 ರಂದು ಸಂಜೆ ಯುವಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರದ ಪೂಜಾ ಕಾರ್ಯಕ್ರಮ ನೆರವೇರಿಸಿದ ನಂತರ ಮಾತನಾಡಿದ ಅವರು ತಿಪಟೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂದರ್ಭದಲ್ಲಿ ತಿಪಟೂರಿನ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಕೌಶಲ್ಯ ತರಬೇತಿ ಕೇಂದ್ರ ತೆರೆಯುವುದಾಗಿ ಘೋಷಿಸಿದ್ದೆ. ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ, ಆದರೆ ಕೌಶಲ್ಯ ತರಬೇತಿ ಕೇಂದ್ರವನ್ನು ಸ್ಥಾಪಿಸುವ ನನ್ನ ಬದ್ಧತೆಯನ್ನು ನಾನು ಸಂಪೂರ್ಣಗೊಳಿಸುತ್ತಿದ್ದು, ಜನಸ್ಪಂದನ ಟ್ರಸ್ಟ್ ಹಾಗು ಬೆಂಗಳೂರಿನ MJSPR ಸಂಸ್ಥೆಯ ಸಹಯೋಗದೊಂದಿಗೆ ಹಲವು ಸಂಸ್ಥೆಗಳ ಜತೆ ಒಪ್ಪಂದದ ಮಾತುಕತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅವರ ಸಹಯೋಗದೊಂದಿಗೆ ‘ಯುವಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರ’ ಪ್ರಾರಂಭವಾಗುತ್ತಿದೆ. ಜಿಲ್ಲೆಯಲ್ಲಿಯೇ ಪ್ರಥಮವಾದ ಈ ಕೌಶಲ್ಯ ತರಬೇತಿ ಕೇಂದ್ರವು ತಿಪಟೂರು ತಾಲ್ಲೂಕಿನ ಯುವಕರಿಗೆ ವಿವಿಧ ಕೋರ್ಸ್ ಗಳಲ್ಲಿ ಕೌಶಲ್ಯ ತರಬೇತಿ ನೀಡುವ ಮೂಲಕ ಯುವಜನತೆಯನ್ನು ಸಬಲೀಕರಣಗೊಳಿಸುವ ಗುರಿ ಹೊಂದಿದೆ. ಇದು ಉದ್ಯೋಗ ಮಾರುಕಟ್ಟೆಯಲ್ಲಿನ ಸ್ಪರ್ಧೆಯನ್ನು ಎದುರಿಸಲು ಯುವಕರಿಗೆ ಹೆಚ್ಚಿನ ವಿಶ್ವಾಸದೊಂದಿಗೆ ಸಹಾಯ ಮಾಡುತ್ತದೆ. ಜನಸ್ಪಂದನ ಟ್ರಸ್ಟ್ ನೊಂದಿಗೆ ಈಗಾಗಲೇ ಪ್ರಸ್ತುತ ಉದ್ಯೋಗ ಮಾರುಕಟ್ಟೆಗೆ ಸಂಬಂಧಿಸಿದ ಕೋರ್ಸ್ ಗಳನ್ನು ವಿನ್ಯಾಸಗೊಳಿಸಲು ವಿವಿಧ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಶೀಘ್ರದಲ್ಲೇ ಕೋರ್ಸ್ ಗಳು ಪ್ರಾರಂಭವಾಗಲಿದ್ದು, ಆರಂಭದ ದಿನಾಂಕವನ್ನು ಸಾಮಾಜಿಕ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮಗಳೊಂದಿಗೆ ಪ್ರಕಟಣೆಯ ಮೂಲಕ ತಿಳಿಸಲಾಗುವುದು.
ಈ ತರಬೇತಿ ಕೇಂದ್ರವು ನಮ್ಮ ಮಹಾತ್ವಾಕಾಂಕ್ಷೆಯ ಹಾಲ್ಕುರಿಕೆ ಮತ್ತು ಕೆ.ಬಿ. ಕ್ರಾಸ್ ನ “ನಮ್ಮ ಆರೋಗ್ಯ ಕೇಂದ್ರ”ಗಳು ಹಾಗು “ಯುವಜನ ಸ್ಪಂದನ” ಕೌಶಲ್ಯ ತರಬೇತಿ ಕೇಂದ್ರದ ಕಾರ್ಪೋರೇಟ್ ಕಚೇರಿಯಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕೇಂದ್ರಕ್ಕೆ ಭೇಟಿ ನೀಡಿ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಯುವ ಜನತೆಗೆ ಉದ್ಯೋಗ ಕಲ್ಪಿಸಿಕೊಳ್ಳುವ ವೇದಿಕೆ ಸಜ್ಜಾಗಿದ್ದು, ಕಲ್ಪತರು ನಾಡು ತಿಪಟೂರಿನ ಜನಸ್ಪಂದನ ಟ್ರಸ್ಟ್ ಜತೆ MJSPR ಪ್ರೈ.ಲಿ. ಸಹಯೋಗದೊಂದಿಗೆ ಈ ತರಬೇತಿ ಕೇಂದ್ರವು ಪ್ರಾರಂಭವಾಗುತ್ತಿದೆ. ಯುವಜನತೆಯ ಪ್ರತಿಭೆಯನ್ನು ಅನಾವರಣಗೊಳಿಸಿ ಅವರ ಸಾಮರ್ಥ್ಯವನ್ನು ಅವರಿಗೆ ಅರ್ಥೈಸಿಕೊಳ್ಳುವಂತೆ ಮಾಡುವುದೇ ನನ್ನ ಮುಖ್ಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ತರಬೇತಿ ಕೇಂದ್ರವು ತಿಪಟೂರು ತಾಲ್ಲೂಕಿನ ಯುವಜನತೆಗೆ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಆತ್ಮ ವಿಶ್ವಾಸವನ್ನು ಬೆಳೆಸಲು ಸಹಕಾರಿಯಾಗಿದೆ ಎಂದು MJSPR ಪ್ರೈ.ಲಿ. ಮುಖ್ಯಸ್ಥರಾದ ಎಂ. ಜೆ. ಶ್ರೀಕಾಂತ್ ತಿಳಿಸಿದರು.
ನಿರುದ್ಯೋಗ ಸಮಸ್ಯೆಯಿಂದ ನರಳುತ್ತಿರುವ ಯುವ ಜನತೆಯ ಕಷ್ಟಕ್ಕೆ ಬೆನ್ನೆಲುಬಾಗಿ ನಿಲ್ಲುವ ಸದುದ್ದೇಶದಿಂದ ಯುವಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
ಯುವಜನತೆ ಆರ್ಥಿಕ ಸಬಲೀಕರಣಕ್ಕೆ ಉದ್ದೇಶದೊಂದಿಗೆ ಯುವಜನತೆಯ ಅಭಿರುಚಿಗೆ ತಕ್ಕಂತೆ ಸಮಾಲೋಚಿಸಿ ಅಗತ್ಯ ತರಬೇತಿಯೊಂದಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಳ್ಳಲು ಕೋರ್ಸ್ ಗಳಿಗೆ ಸೇರಲು ಇಚ್ಛಿಸುವ ಆಸಕ್ತರು ತರಬೇತಿ ಕೇಂದ್ರದ ದೂರವಾಣಿ ಮೂಲಕ ಸಂಪರ್ಕಿಸಬಹುದು: 8073619969.