ಸುದ್ದಿಮೂಲ ವಾರ್ತೆ
ಕಲಬುರಗಿ: ರಾಜ್ಯದಲ್ಲಿ ವ್ಯಾಪಕ ವಾಗಿ ಮರಳು ಮಾಫಿಯಾ ನಡೆಯುತ್ತಿದ್ದು, ಕೂಡಲೇ ರಾಜ್ಯ ಸರಕಾರ ಈ ಅಕ್ರಮ ಮರಳು ಮಾಫಿಯಾ ತಡೆಗಟ್ಟಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ವಾಟಾಳ ಪಕ್ಷದ ಅಧ್ಯಕ್ಷ ವಾಟಾಳ ನಾಗರಾಜ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಈ ಅಕ್ರಮ ಮರಳು ಸಾಗಾಟ ಮಾಡುವುದನ್ನು ತಡೆಗಟ್ಟಲು ಹೋಗಿದ್ದ ಪೊಲೀಸ್ ಪೇದೆ ಮೇಲೆ ದುಷ್ಕರ್ಮಿಗಳು ಟ್ರ್ಯಾಕ್ಟರ್ ಹರಿಸಿ ಭೀಕರವಾಗಿ ಕೊಲೆ ಮಾಡಿರುವುದು ಈ ಮರಳು ಮಾಫಿಯಾ ಗುಂಡಾಗಿರಿಗೆ ತಾಜಾ ನಿರ್ದಶನವಿದೆ. ಕೂಡಲೇ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಮಂತ್ರಿ ಜಿ.ಪರಮೇಶ್ವರ ಅವರು ಈ ಮರಳು ಮಾಫಿಯಾ ತಡೆಗಟ್ಟಲು ಕಾಯ್ದೆ ರೂಪಿಸಬೇಕು ಎಂದು ಆಗ್ರಹಿಸಿದರು.
ಮರಳು ಮಾಫಿಯಾದಿಂದ ಕೊಲೆಯಾದ ಪೊಲೀಸ್ ಪೇದೆ ಮಯೂರ ಚವ್ಹಾಣ ಅವರ ಗ್ರಾಮಕ್ಕೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿರುವೆ. ಸರಕಾರ ಈ ಮೃತ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಎಲ್ಲ ಪಕ್ಷದ ರಾಜಕಾರಣಿಗಳು ಈ ಅಕ್ರಮ ಮರಳು ದಂಧೆ ನಡೆಸುತ್ತಿದ್ದು, ಈ ರಾಜಕಾರಣಿಗಳ ಕೈವಾಡ ಇಲ್ಲದೆ ಮತ್ತು ಪೊಲೀಸರ ಸಹಕಾರವಿಲ್ಲದೆ ಈ ಮರಳು ಮಾಫಿಯಾ ನಡೆಯುವುದಿಲ್ಲ. ಹೀಗಾಗಿ ರಾಜ್ಯ ಸರಕಾರ ಈ ಮರಳು ಮಾಫಿಯಾ ತಡೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಪುರುಷರಿಗೂ ಉಚಿತ ಬಸ್ ಸೌಲಭ್ಯ ನೀಡಿ
ಕಾಂಗ್ರೆಸ್ ಚುನಾವಣೆ ಪ್ರಚಾರದ ಭರಾಟೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿದೆ. ಆದರೆ, ಅವುಗಳನ್ನು ಅನುಷ್ಠಾನಕ್ಕೆ ತರಲು ಸರ್ಕಸ್ ಮಾಡುತ್ತಿದೆ. ಮಹಿಳೆಯರು, ಪುರುಷರೂ ಸಹ ಮತದಾನ ಮಾಡಿದ್ದಾರೆ. ಆದರೆ, ಕೇವಲ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ನೀಡುವುದು ಎಷ್ಟು ಸೂಕ್ತವೆಂದು ರಾಜ್ಯ ಸರಕಾರವನ್ನು ಪ್ರಶ್ನಿಸಿರುವ ವಾಟಾಳ ನಾಗರಾಜ ಅವರು, ಮಹಿಳೆಯರಿಗೆ ನೀಡಿದಂತೆ ಪುರುಷರಿಗೂ ಉಚಿತ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪುರುಷರಿಗೂ ಉಚಿತ ಬಸ್ ಸೌಲಭ್ಯ ಯೋಜನೆ ಜಾರಿಗೆ ತರುವಂತೆ ನಾನು ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಭೇಟಿಯಾಗಿ ಮನವಿ ಮಾಡುವೆ ಎಂದು ಹೇಳಿದರು.
ನಿರುದ್ಯೋಗಿಗಳಿಗೆ ಭತ್ಯೆ ಕೊಡುವ ಬದಲು ಉದ್ಯೋಗ ಸೃಷ್ಟಿಸುವ ಕೆಲಸವಾಗಬೇಕು. ರಾಜ್ಯದಲ್ಲಿ ಸುಮಾರು ಎರಡುವರೆ ಲಕ್ಷ ಉದ್ಯೋಗ ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಬೇಕು. ರಾಜ್ಯದಲ್ಲಿರುವ ಬಹುರಾಷ್ಟಿಯ (ಐಟಿ,ಬಿಟಿ) ಕಂಪನಿಗಳಿಗೆ ಸಾವಿರಾರು ಎಕರೆ ನಿವೇಶನ ನೀಡುವ ಸರಕಾರಗಳು ಅಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಿಲ್ಲ. ಪ್ರಸ್ತುತ ಕಾಂಗ್ರೆಸ್ ಐಟಿ,ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಮುಂದಿನ ವರ್ಷ ಮತ್ತೆ ಲೋಕಸಭೆ ಚುನಾವಣೆ ಬರುತ್ತಿದ್ದು, ಈ ವೇಳೆಗೆ ಕೇಂದ್ರ ಚುನಾವಣಾ ಆಯೋಗ ಕಟ್ಟಿನಿಟ್ಟಿನ ನೀತಿ ಒಳಗೊಂಡಿರುವ ಕಾಯ್ದೆ ಜಾರಿಗೆ ತರಬೇಕು. ಏಕೆಂದರೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರವಾರು ಅಭ್ಯರ್ಥಿಗಳು 40 ಲಕ್ಷ ಚುನಾವಣೆ ಖರ್ಚಿಗೆ ನಿಗದಿ ಪಡಿಸಿತ್ತು. ಆದರೆ, ಎಲ್ಲ ರಾಜಕಾರಣಿಗಳು ಅದಕ್ಕಿಂತಲೂ ಹೆಚ್ಚಿನ ಹಣ ಖರ್ಚು ಮಾಡಿದ್ದಾರೆ. ಬಹಿರಂಗವಾಗಿಯೇ ಮತದಾರರಿಗೆ ಹಣ ಹಂಚಿದ್ದಾರೆ. ಆದರೆ, ಚುನಾವಣಾ ಆಯೋಗ ಒಬ್ಬರ ಮೇಲೂ ಕೇಸ್ ದಾಖಲಿಸಿಲ್ಲ ಎಂದು ಚುನಾವಣಾ ಆಯೋಗದ ವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಗೆ ಇಂತಿಷ್ಟೇ ಹಣ ಖರ್ಚು ಮಾಡಬೇಕು. ಮತದಾರರಿಗೆ ಹಣ ಹಂಚಿಕೆ ಆಗಬಾರದು. ಹಣ ಹಂಚಿದರೆ ಅವರು ಚುನಾವಣೆಗೆ ನಿಲ್ಲದಂತೆ ಕ್ರಮವಾಗಬೇಕು. ಒಟ್ಟಾರೆ ಚುನಾವಣೆ ನೀತಿ ಕಠಿಣವಾಗಿರುವಂತೆ ಕೇಂದ್ರ ಚುನಾವಣೆ ಆಯೋಗ ತಿದ್ದುಪಡಿ ಮಾಡಿ ಹೊಸ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ನೂತನ ಚುನಾವಣೆ ನೀತಿ ಜಾರಿಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನ ರಾಜ್ಯ ಚುನಾವಣಾ ಆಯೋಗದ ಕಚೇರಿ ಎದುರು ಶೀಘ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮನಾಥ ಕಟ್ಟಿಮನಿ, ಪಾರ್ಥಸಾರಥಿ, ಶರಣು ಹಾಗರಗಿ, ಮಂಜುನಾಥ, ಶ್ರೀಧರ ಇದ್ದರು.