ಸುದ್ದಿಮೂಲ ವಾರ್ತೆ
ಮೈಸೂರು, ಜೂ.18: ಸರ್ಕಾರದ ಗ್ಯಾರಂಟಿಗಳ ಜೊತೆಗೆ ವಿದ್ಯುತ್ ದರ ಏರಿಕೆ ಜನರಿಗೆ ತೊಂದರೆ ಆಗಲಿದ್ದು, ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಅಲ್ಲದೇ, ವಿದ್ಯುತ್ ದರ ಹೆಚ್ಚಳದಲ್ಲೂ ಲೋಪವಾಗಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಏರಿಸಿರುವ ವಿದ್ಯುತ್ ದರವನ್ನು ಪುನರ್ ಪರಿಶೀಲನೆ ಮಾಡಬೇಕು. ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರವೇ ನೇರ ಕಾರಣ. ವಿದ್ಯುತ್ ದರ ಹೆಚ್ಚಳಕ್ಕೆ ಕೆ ಇ ಆರ್ ಸಿ ಮಾಡಿದ್ದ ಶಿಫಾರಸ್ಸಿಗೆ ಈ ಹಿಂದಿನ ಬಿಜೆಪಿ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಆರೋಪಿಸಿದರು.
ಪಠ್ಯಪುಸ್ತಕ ಪರಿಷ್ಕರಣೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಮಕ್ಕಳ ವಯೋಮಾನಕ್ಕೆ ತಕ್ಕಂತೆ ಸ್ವೀಕರಿಸಲು ಸಾಧ್ಯವಿರುವ ಶಿಕ್ಷಣ ಕೊಡಬೇಕು. ನಾವು ಕೊಡುವ ಶಿಕ್ಷಣದಿಂದ ಮಕ್ಕಳ ಜೀವನಶೈಲಿ ಬದಲಾಗಬೇಕು. 2016ರಲ್ಲಿ ಪ್ರಾಥಮಿಕ ಶಿಕ್ಷಣ ಸಚಿವನಾಗಿದ್ದಾಗ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಮಾಡಿದ್ದ ಶಿಫಾರಸ್ಸಿನ ಅನ್ವಯ 1 ರಿಂದ 10ನೇ ತರಗತಿಯವರೆಗೂ ಪಠ್ಯಕ್ರಮವನ್ನು ಪರಿಷ್ಕರಣೆ ಮಾಡಲಾಗಿತ್ತು ಎಂದರು.
ಅಡ್ಜೆಸ್ಟ್ ಮೆಂಟ್ ರಾಜಕೀಯ ನನಗೆ ಗೊತ್ತಿಲ್ಲ. ಆ ರೀತಿ ಮಾಡಿರುವವರಿಗೆ ಆ ವಿಚಾರ ಗೊತ್ತು ಎಂದು ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದರು.