ಕಾಕಿನಾಡ,ಜೂ.19: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೈಗೊಂಡ ಭಾರತ್ ಜೋಡೋ ಯಾತ್ರೆ ದೇಶದಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗಿದ್ದು, ಇದರಿಂದ ರಾಜಕೀಯ ವ್ಯವಸ್ಥೆಯಲ್ಲಿ ದ್ವೇಷದಿಂದ ಶಾಂತಿಯೆಡೆ ಪಯಣ ಆರಂಭವಾಗಿದೆ ಎಂದು ಆಂಧ್ರಪ್ರದೇಶ ಯುವ ಕಾಂಗ್ರೆಸ್ ಉಸ್ತುವಾರಿ ಮತ್ತು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಕಾಕಿನಾಡದಲ್ಲಿಂದು ನೂರಾರು ಮಹಿಳೆಯರಿಗೆ ಸೀರೆ ವಿತರಿಸಿ ಅವರು ಮಾತನಾಡಿದರು.
ಭಾರತ್ ಜೋಡೋ ಯಾತ್ರೆ ನಂತರ ರಾಹುಲ್ ಗಾಂಧಿ ಅವರ ವರ್ಚಸ್ಸು, ನಾಯಕತ್ವದ ಬಗ್ಗೆ ಎಲ್ಲೆಡೆ ಉತ್ತಮ ಅಭಿಪ್ರಾಯ ಕೇಳಿ ಬರುತ್ತಿದ್ದು, ಅವರು ಎಲ್ಲರ ನಾಯಕರಾಗಿ ಹೊರ ಹೊಮ್ಮುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಹೊಸ ಉತ್ಸಾಹ ತುಂಬಲು “ಭಾರತ್ ಜೋಡೋ ಯಾತ್ರೆ’ ಸಹಕಾರಿಯಾಗಿದ್ದು, ಕಾಂಗ್ರೆಸ್ ಮತ್ತೆ ತನ್ನ ಗತ ವೈಭವವನ್ನು ಮರಳಿ ಪಡೆಯಲು ಇದು ವೇದಿಕೆಯಾಗಿದೆ. ತಮ್ಮ ಯಾತ್ರೆಯುದ್ಧಕ್ಕೂ ಸಮಾಜದ ವಿವಿಧ ವರ್ಗಗಳ ಜನರನ್ನು ಭೇಟಿ ಮಾಡಿ ಅವರ ಮನದ ಮಾತು ಆಲಿಸಿದ್ದಾರೆ. ರಾಹುಲ್ ಗಾಂಧಿ ಅವರು ಕಣ್ಣಾರೆ ನೋಡಿದ ಹಲವಾರು ಸಮಸ್ಯೆಗಳಿಗೆ ಮುಂಬರುವ ದಿನಗಳಲ್ಲಿ ಸೂಕ್ತ ಪರಿಹಾರ ದೊರೆಯುವ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಕಳೆದ ವರ್ಷದ ಸೆಪ್ಟೆಂಬರ್ 7 ರಿಂದ ಜನವರಿ 30 ರ ವರೆಗೆ ನಡೆದಿತ್ತು. 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಮೂಲಕ ಯಾತ್ರೆ ಸಾಗಿದ್ದು, ಇದು ರಾಜಕೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಿದೆ ಎಂದು ಹೇಳಿದರು.