ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಜೂ.19: ಉನ್ನತ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ ಸಂಘದ ಪಾಲುದಾರರು ಸುಜ್ಞಾನನಿಧಿ ಶಿಷ್ಯವೇತನವನ್ನು ಜಾರಿಗೆ ತಂದಿದ್ದಾರೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿಶ್ವನಾಥಪುರ ಗ್ರಾಪಂ ಉಪಾಧ್ಯಕ್ಷ ವಿನಯ್ಕುಮಾರ್ ತಿಳಿಸಿದರು.
ಪಟ್ಟಣದ ಲಯನ್ಸ್ ಕ್ಲಬ್ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸುಜ್ಞಾನ ನಿಧಿ ಶಿಷ್ಯ ವೇತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘದಿಂದ ದೊರೆಯುವ ವೇತನ ಅನೇಕ ಬಡಮಕ್ಕಳಿಗೆ ಅನುಕೂಲವಾಗಲಿದೆ. ಪೋಷಕರು ಹಣವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾತ್ರ ಬಳಸಿಕೊಳ್ಳಬೇಕು. ಧರ್ಮಸ್ಥಳ ಸಂಘದಲ್ಲಿ ಎಲ್ಲರೂ ಸದಸ್ಯತ್ವ ಹೊಂದಿ ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ನ ಯೋಜನಾಧಿಕಾರಿ ರವಿರಾಜ್ ನಾಯಕ್ ಮಾತನಾಡಿ, ಸಂಘದಿಂದ 50ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ಸಹಾಯ ಧನವನ್ನು ನೀಡಲಾಗುತ್ತಿದೆ. ಶಿಷ್ಯವೇತನ ಯೋಜನೆಯನ್ನು ಪ್ರಸ್ತುತ ರಾಜ್ಯದಲ್ಲಿ 4,70,630 ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ದೇವನಹಳ್ಳಿ ತಾಲೂಕಿನಲ್ಲಿ ಈಗಾಗಲೇ 568 ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ. 2023-24ನೇ ಸಾಲಿಗೆ 105 ಮಂದಿ ಆಯ್ಕೆಯಾಗಿದ್ದಾರೆ. ತಾಂತ್ರಿಕ ಮತ್ತು ವೃತ್ತಿಪರ ಕೋರ್ಸುಗಳನ್ನು ಓದುವ ಮಕ್ಕಳಿಗೆ ಶಿಕ್ಷಣ ಮುಗಿಯುವ ವರೆಗೂ ಪ್ರತಿ ತಿಂಗಳು 400 ರಿಂದ 1000 ಸಾವಿರ ವರೆಗೆ ಸೌಲಭ್ಯವನ್ನು ನೀಡಲಾಗುತ್ತದೆ ಎಂದರು.
ಇದೇ ವೇಳೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ನ ದೇವನಹಳ್ಳಿ ವಲಯ ಮೇಲ್ವಿಚಾರಕರಾದ ಚಂದ್ರು, ಕಚೇರಿ ವ್ಯವಸ್ಥಾಪಕರಾದ ರಕ್ಷಿತ್, ಲೆಕ್ಕಪರಿಶೋಧಕ ಉಮೇಶ್, ನರಸಿಂಹಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷೆ ಗೋಪಮ್ಮ.ಡಿ ಸೇರಿದಂತೆ ಅನೇಕರು ಇದ್ದರು.