ಸುದ್ದಿಮೂಲ ವಾರ್ತೆ
ಯಾದಗಿರಿ,ಜೂ.20 :ಜನನ, ಮರಣ, ಜಾತಿ, ಆದಾಯ, ಆಧಾರ್, ಪಹಣಿ ಮತ್ತು ಮುಟೇಶನ್ ಸೇರಿದಂತೆ ಹತ್ತಾರು ಸೇವೆಗಳಿಗೆ ನೆರವಾಗುವ ನಾಡಕಛೇರಿಯಿಂದ (ನಾಡ ಕಾರ್ಯಾಲಯ) ಸಾರ್ವಜನಿಕರಿಗೆ ಕಡಿಮೆ ಶುಲ್ಕದಲ್ಲಿ ಶೀಘ್ರ ಸೇವೆ ಸಿಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಅವರು ಹೇಳಿದರು.
ಶಹಾಪುರ ತಹಸಿಲ್ದಾರರ ಕಾರ್ಯಾಲಯ ಆವರಣದಲ್ಲಿ ಇಂದು ಕಂದಾಯ ಇಲಾಖೆಯ 18.84 ಲಕ್ಷ ರೂಗಳ ವೆಚ್ಚದ ನೂತನ ನಾಡ ಕಚೇರಿ (ನಾಡ ಕಾರ್ಯಾಲಯ) ಉದ್ಘಾಟಿಸಿ ಅವರು ಮಾತನಾಡಿದರು.
ಶಹಾಪುರ ನಗರದ ಜನತೆಗೆ ಪ್ರತ್ಯೇಕ ನಾಡ ಕಚೇರಿ ಇಲ್ಲದ ಕಾರಣ ಇಷ್ಟು ದಿನ ನೂಕು ನುಗ್ಗಲಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ನೂತನವಾಗಿ ಪ್ರಾರಂಭಗೊಂಡ ಕಚೇರಿಯು ಈ ಭಾಗದ ಜನರಿಗೆ ಉತ್ತಮ ಸೇವೆ ಸವಲತ್ತು ನೀಡುವ ಮೂಲಕ ಎಲ್ಲರಿಗೂ ಸಹಕಾರಿಯಾಲಿದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಶ್ರೀಮತಿ ಸ್ನೇಹಲ್.ಆರ್ ಅವರು ಮಾತನಾಡಿ, ಭೂಮಿ, ಮೋಜಿಣಿ, ಉತಾರ ಸೇರಿದಂತೆ 43 ಸೇವೆಗಳ ಜೊತೆಗೆ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಸೇವೆಯ ಸೌಲಭ್ಯ ಇಲ್ಲಿಯೇ ಸಿಗಲಿದೆ. ನಿಮ್ಮ ಮನೆ ಅಂಗಳದಲ್ಲೆ ಎಲ್ಲಾ ಸೇವೆಗಳ ಸೌಲಭ್ಯ ಸಿಗಲಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಸಿಗಳಿಗೆ ಗೊಬ್ಬರ ಹಾಕಿ ನೀರೆರೆದು, ನಗರಸಭೆಯ 3 ನೂತನ ವಾಹನಗಳಿಗೂ ಸಚಿವರು, ಜಿಲ್ಲಾಧಿಕಾರಿಯವರು, ಯಾದಗಿರಿ ಶಾಸಕರು ಇಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರೂ ಕೂಡ ಹತ್ತಾರು ಸಮಸ್ಯೆಗಳ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇದೇ ಸಂಧರ್ಭದಲ್ಲಿ ಯಾದಗಿರಿ ಮತಕ್ಷೇತ್ರದ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ತಹಶೀಲ್ದಾರರಾದ ಉಮಾಕಾಂತ ಹಳ್ಳೆ,
ಗ್ರೇಡ್-2 ತಹಸೀಲ್ದಾರರಾದ ಸೇತುಮಾಧವ ಕುಲಕರ್ಣಿ,
ಉಪ ತಹಸೀಲ್ದಾರರಾದ ಸಂಗಮೇಶ ನಾಯಕ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾದ ಸೋಮಶೇಖರ್, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಕಿರಣಕುಮಾರ ಹೂಗಾರ, ತಾಲೂಕು ನೌಕರ ಸಂಘದ ಅಧ್ಯಕ್ಷರಾದ ರಾಯಪ್ಪಗೌಡ ಉಡೆದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.