ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.20: ಕಾಂಗ್ರೆಸ್ ಸಿಎಂಗೆ ಧಮ್ಮಿದ್ದರೆ, ತಾಕತ್ತಿದ್ದರೆ ಎಲ್ಲ ಕಡೆಯಿಂದ ಅಕ್ಕಿ ಶೇಖರಿಸಿ. ಕೆಂದ್ರದ 5 ಪ್ಲಸ್ 10 ಕೆಜಿ ಸೇರಿ ಪ್ರತಿಯೊಬ್ಬರಿಗೆ 15 ಕೆಜಿ ಅಕ್ಕಿ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದರು.
ಬಿಜೆಪಿ ವತಿಯಿಂದ ಇಂದು ನಗರದ ಆನಂದ ರಾವ್ ವೃತ್ತದ ಬಳಿ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದಾಗ ಅವರನ್ನು ಪೊಲೀಸರು ಬಂಧಿಸಿದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಒಂದು ಕುಟುಂಬದಲ್ಲಿ 5 ಜನರಿದ್ದರೆ 75 ಕೆಜಿ ಕೊಡಬೇಕು. ಅದನ್ನು ಮಾಡದೆ ಪ್ರತಿಭಟಿಸುತ್ತೀರಾ? ನಿಮಗೆ ಅಧಿಕಾರ ಕೊಟ್ಟದ್ದು ಪ್ರತಿಭಟನೆ ಮಾಡಲೆಂದೇ? ಎಂದು ಪ್ರಶ್ನಿಸಿದರು. ಇದೊಂದು ಸುಳ್ಳ- ಮಳ್ಳ ಸರಕಾರ. ಸುಳ್ಳು ಹೇಳುವುದು ಮತ್ತು ಮೋಸ ಮಾಡುವ ಸರಕಾರವಿದು ಎಂದು ಟೀಕಿಸಿದರು.
ನಾವು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಮೊದಲು ತಾತ್ವಿಕ ಒಪ್ಪಿಗೆ ನೀಡಿ ಜುಲೈ 1ರಿಂದ ಜಾರಿ ಎಂದು ಹೇಳಿದ್ದರು. ಆದರೆ ಯಾವುದೇ ತಯಾರಿ ಮಾಡಿಕೊಳ್ಳಲಿಲ್ಲ. ಈಗ ಕೇಂದ್ರ ಅಕ್ಕಿ ಕೊಡುವುದಿಲ್ಲ ಎಂದು ಸುಳ್ಳು ಹೇಳುತ್ತಿದ್ದೀರಿ. ಕೇಂದ್ರ ತನ್ನ ಪಾಲನ್ನು ಈಗಾಗಲೇ ಕೊಟ್ಟಿದೆ. ಜನರು ನಿಮ್ಮ ಸುಳ್ಳು ಭರವಸೆ, ಸುಳ್ಳು ಗ್ಯಾರಂಟಿಗಳ ಜೊತೆ ಸುಳ್ಳು ನೆಪಗಳನ್ನೂ ಸಹ ಗಮನಿಸಿದ್ದಾರೆ ಎಂದು ಹೇಳಿದರು.
ಮತ್ತೊಂದೆಡೆ ರಾಜ್ಯ ಸರಕಾರ ಕರೆಂಟ್ ಶಾಕ್ ಕೊಡುತ್ತಿದೆ. ಇವತ್ತು ಇವರು ಕೊಟ್ಟ ಬಿಲ್ಲನ್ನು ಬಡವರು, ಕೈಗಾರಿಕೆದಾರರು ಸೇರಿ ಯಾರಿಗೂ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಸರಕಾರವೇ ವಿದ್ಯುತ್ ದರ ಏರಿಸಿದೆ. ದುಪ್ಪಟ್ಟು ಏರಿಕೆ ಆಗಿದೆ. ಮನಸ್ಸು ಮಾಡಿದರೆ ಅದನ್ನು ಏರಿಸದೆ ಇರಬಹುದಿತ್ತು. ಯಾಕೆ ಸ್ವಾಮೀ ಬಡವರ ಬಗ್ಗೆ ಮಾತನಾಡಿ ಅಧಿಕಾರ ಪಡೆದ ನೀವು ಬಡವರಿಗೆ ಮೋಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಇದೇ ರೀತಿಯಾದರೆ ಮುಂದೆ ಬಸ್ಗಳು ನಿಂತು ಹೋಗಲಿವೆ. ಶಾಲಾ ಮಕ್ಕಳಿಗೆ ಬಸ್ಸಿಲ್ಲದೆ ಮುಷ್ಕರ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಮತ್ತು ಕೈಗಾರಿಕೆಗಳಿಗೆ ಕುಡಿಯುವ ನೀರೂ ಸಿಗುತ್ತಿಲ್ಲ. ಕೇವಲ ಒಂದೂವರೆ ತಿಂಗಳಲ್ಲಿ ರಾಜ್ಯದ ಪ್ರಗತಿ ಹಳಿ ತಪ್ಪಿದೆ. ಕೆಲಸಗಳ ಹಣ ಪಾವತಿ ಆಗುತ್ತಿಲ್ಲ. ಕಾಂಗ್ರೆಸ್ ಕಮಿಷನ್ ನಿಗದಿಪಡಿಸಲು ಸಚಿವರು ಮುಂದಾಗಿದ್ದಾರೆ. ಅಧಿಕಾರಿಗಳನ್ನು ಕರೆದು ಮಂತ್ಲಿ ಫಿಕ್ಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಸಚಿವ ಆರ್.ಅಶೋಕ್ ಅವರು ಮಾತನಾಡಿ, ಸರಕಾರದ ಚಿತಾವಣೆಯಿಂದ ನಮ್ಮನ್ನು ಬಂಧಿಸಿದ್ದಾರೆ. ಇದು ಅಕ್ಷಮ್ಯ ಎಂದು ಟೀಕಿಸಿದರು. 10 ಕೆಜಿ ಅಕ್ಕಿ ಸುಳ್ಳು. ಮೋದಿಜಿ ಅವರ ಅಕ್ಕಿ ಮಾತ್ರ ಗ್ಯಾರಂಟಿ. ಅಕ್ಕಿ ವಿಚಾರದಲ್ಲಿ ಸುಳ್ಳುಗಳನ್ನೇ ಹೇಳುತ್ತಿದ್ದಾರೆ. ಗ್ಯಾರಂಟಿಗಳನ್ನು ಕಂಡಿಷನ್ ಮೇಲೆ ಜಾರಿ ಮಾಡುತ್ತಿದ್ದಾರೆ. ಕಾಂಗ್ರೆಸ್ನದು ಮಾತು ತಪ್ಪಿದ, ಮೋಸ ಮಾಡುವ ಸರಕಾರ. ವಂಚನೆಯ ಸರಕಾರ ಎಂದು ಆರೋಪಿಸಿದರು.
ಅಕ್ಕಿ ಕೊಡುವುದನ್ನು ಮುಂದೂಡಲು ಮೋದಿಯವರ ಹೆಸರನ್ನು ತರುತ್ತಿದ್ದಾರೆ. ಅಧಿಕಾರದಲ್ಲಿ ಇದ್ದುಕೊಂಡೂ ಪ್ರತಿಭಟನೆ ಮಾಡುತ್ತಿದ್ದೀರಿ ಎಂದರೆ ನೀವು ಕೆಲಸ ಮಾಡಲು ನಾಲಾಯಕ್ ಎಂದು ಆರೋಪಿಸಿದರು.
ಶಾಸಕರಾದ ಮುನಿರಾಜು, ಎಂ.ಕೃಷ್ಣಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಎನ್ ರವಿಕುಮಾರ್, ವಿಧಾನ ಪರಿಷತ್ತಿನ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ತೇಜಸ್ವಿನಿ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾಧ್ಯಕ್ಷರಾದ ಮಂಜುನಾಥ್, ನಾರಾಯಣಗೌಡ ಮತ್ತಿತರ ಪ್ರಮುಖರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.