ಸುದ್ದಿಮೂಲ ವಾರ್ತೆ
ಮೈಸೂರು,ಜೂ.20:ಸಚಿವರಾದ ಎಂ.ಬಿ. ಪಾಟೀಲ್, ಡಾ.ಎಚ್.ಸಿ.ಮಹದೇವಪ್ಪರನ್ನು ಸಿಎಂ ಸಿದ್ದರಾಮಯ್ಯನವರ ಚೇಲಾಗಳು ಎಂದು ಟೀಕಿಸಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ. ಎಲ್ ಸಂತೋಷ್ ಚೇಲಾಗಳ ಅಧ್ಯಕ್ಷ ಪ್ರತಾಪ ಸಿಂಹ, ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಎಂದು ಪ್ರತಿ ಟೀಕೆ ಮಾಡಿದ್ದು, ಪ್ರತಾಪ್ ಸಿಂಹ ಕೊಡಗಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ವಿಧಾನಸಭೆ ಚುನಾವಣೆಯಲ್ಲಿ ಸೋತ ಮೇಲೆ ಪ್ರತಾಪ ಸಿಂಹ, ಸಿಟಿ ರವಿ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುತ್ತಿರುವುದು ಮತ್ತು ಅರಚಾಡುವುದು ಆರ್ಎಸ್ ಎಸ್ ಮುಖಂಡರು ಮತ್ತು ಕೇಂದ್ರಕ್ಕೆ ಗೊತ್ತಾಗಲಿ ಎಂಬುದು. ಪ್ರತಾಪ್ ಸಿಂಹ ತಮ್ಮ ಮೈಸೂರು ಜಿಲ್ಲೆ ಲೋಕಸಭಾ ವ್ಯಾಪ್ತಿಯಲ್ಲಿ ಒಂದೇ ಒಂದು ಕ್ಷೇತ್ರ ಮಾತ್ರ ಗೆಲ್ಲಿಸಿದ್ದಾರೆ. ಸೋಲಿನ ಬಗ್ಗೆ ಅವರು ನೈತಿಕ ಹೊಣೆ ಹೊರಲಿ, ಸಂಸತ್ ನಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೀರಾ? ನಿಮ್ಮ ಮೇಲೆ ಯಾರು ಗನ್ ಇಟ್ಟು ಶೂಟ್ ಮಾಡುತ್ತಿದ್ದಾರೆ ಪ್ರತಾಪ್ ಸಿಂಹ ಹೇಳಲಿ ಎಂದು ಆಗ್ರಹಿಸಿದರು.
ಸಚಿವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ
ಸಚಿವರಾದ ಎಂ ಬಿ ಪಾಟೀಲ್, ಹೆಚ್ ಸಿ ಮಹದೇವಪ್ಪ ಬಗ್ಗೆ ಮಾತನಾಡುವ ನೈತಿಕತೆ ಪ್ರತಾಪ್ ಸಿಂಹಗಿಲ್ಲ. ಬೇನಾಮಿ ದುಡ್ಡಿನಲ್ಲಿ ಬಂದ ಹಣವನ್ನು ಮಡಿಕೇರಿಯಲ್ಲಿ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದಾರೆ. ಅದರ ಮೇಲೆ 60 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಸಿಂಡಿಕೆಟ್ ಸದಸ್ಯರನ್ನಾಗಿ ಮಾಡಿರುವ ಅವರಿಗೂ ನಿಮಗೂ ಇರುವ ಸಂಬಂಧವೇನು? ಪ್ರತಾಪ್ ಸಿಂಹ ಬ್ಲಾಕ್ ಮನಿ ಹೂಡಿಕೆ ಮಾಡಿದ್ದಾರೆ ಎನ್ನುವ ಮಾಹಿತಿ ಇದ್ದು, ಈ ಬಗ್ಗೆ ಸಿಎಂಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸಲಾಗುವುದು ಗಂಭೀರ ಆರೋಪ ಮಾಡಿದರು.
ಪ್ರತಾಪ ಸಿಂಹಗೆ ಇದ್ದಕ್ಕಿದ್ದಂತೆ ಇದೀಗ ಡಿ.ಕೆ ಶಿವಕುಮಾರ್ ಮೇಲೆ ಪ್ರೀತಿ ಉಂಟಾಗಿದೆ. ಇಲ್ಲ ಸಲ್ಲದ ಆರೋಪ ಮಾಡಿ ಡಿ.ಕೆ ಶಿವಕುಮಾರ್ರನ್ನು ಜೈಲಿಗೆ ಹಾಕಿಸಿದ್ದರು,, ಅವರು ಜೈಲಿಗೆ ಹೋದಾಗ ಉಪ್ಪು ತಿಂದವರು ನೀರು ಕುಡೀತಾರೆಂದು ಹೇಳಿದ್ದಿರಲ್ಲ ಎಂದರು.
ಚರ್ಚೆಗೆ ಸವಾಲು
ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿ ವಿಚಾರವಾಗಿ ಡಾ. ಹೆಚ್. ಸಿ ಮಹದೇವಪ್ಪ ಜೊತೆ ಚರ್ಚೆಗೆ ಸಂಸದ ಪ್ರತಾಪಸಿಂಹಗೆ ಸವಾಲು ಹಾಕಿದ್ದಾರೆ. ಏರ್ ಪೋರ್ಟ್ ವಿಚಾರವಾಗಿ ನೀವು ಹೇಳಿದ ಕಡೆಯಲ್ಲಿ ಸಭೆ ಮಾಡೋಣ. ಸಚಿವ ಡಾ ಹೆಚ್, ಸಿ ಮಹದೇವಪ್ಪ ಅವರನ್ನು ಕರೆದುಕೊಂಡು ಬರುತ್ತೇವೆ. ಏರ್ ಪೋರ್ಟ್ ಅಭಿವೃದ್ಧಿಗೆ ನಿಮ್ಮ ಯೋಜನೆ ಏನಿದೆ ಎಂದು ಹೇಳಿ ಎಂದು ಸವಾಲು ಹಾಕಿದರು.