ತುಮಕೂರು, ಜೂ.20 : ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ಖರೀದಿಸುವ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಕೆ ಶ್ರೀನಿವಾಸ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೊಬ್ಬರಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ರೈತರೊಂದಿಗೆ ಚರ್ಚಿಸಿದರು. ರೈತರ ಅನುಕೂಲಕ್ಕಾಗಿ ತೆರೆದ
ನ್ಯಾಫೆಡ್ ಕೇಂದ್ರದಲ್ಲಿ ಕೊಬ್ಬರಿ ಖರೀದಿಗೆ ಮೊದಲು ಅದರ ಗುಣಮಟ್ಟ ಪರೀಕ್ಷಿಸಿ ಗ್ರೇಡ್ ನೀಡಲಾಗುತ್ತದೆ. ಆದ್ದರಿಂದ ರೈತರು ಗುಣಮಟ್ಟದ ಕೊಬ್ಬರಿ ತರಬೇಕು ಎಂದು ಮನವಿ ಮಾಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಹಾಗೂ ಕೊಬ್ಬರಿ ಖರೀದಿ ಕೇಂದ್ರದಲ್ಲಿ ಅವ್ಯವಹಾರವಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಜಿಲ್ಲಾಧಿಕಾರಿಗಳು ತಿಪಟೂರು ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೊಬ್ಬರಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಕಲ್ಪಶ್ರೀ, ತಹಸೀಲ್ದಾರ್ ಅರ್ಚನಾಭಟ್, ಕ.ರಾ.ಸ.ಮಾ.ಮ.ಮ ನಿಯಮಿತದ ಶಾಖಾ ವ್ಯವಸ್ಥಾಪಕ ಕಾರ್ತೀಕ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಚೈತ್ರ ಮತ್ತಿತರರು ಹಾಜರಿದ್ದರು.