ಸುದ್ದಿಮೂಲ ವಾರ್ತೆ
ಮಾಲೂರು, ಜೂ 20 :ತಾಲ್ಲೂಕಿನ ಸರ್ಕಾರಿ ಜಮೀನುಗಳನ್ನು ಉಳಿಸುಕೊಳ್ಳುವಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸoಚಾಲಕ ಚವ್ವೇನಹಳ್ಳಿ ವಿಜಿ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಅನಿರ್ಧಿಷ್ಟಾವಧಿಯ
ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಇತ್ತೀಚೆಗೆ ಭೂಮಿ ಬೆಲೆ ಹೆಚ್ಚಾಗಿದ್ದು ರಿಯಲ್ ಎಸ್ಟೇಟ್ ಮತ್ತು ಭೂಮಾಫಿಯಗಳ ಜೊತೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸೇರಿಕೊಂಡು ನಕಲಿ ದಾಖಲಾತಿಗಳನ್ನು ಸೃಷ್ಠಿಮಾಡಿ ಸರ್ಕಾರಿ ಗೋಮಾಳ ಕೆರೆ ಕುಂಟೆ ತೋಪುಗಳನ್ನು ಅಕ್ರಮವಾಗಿ ಪರಬಾರಿ ಮಾಡಿಕೊಳ್ಳಲು ಮುಂದಾಗಿದ್ದಾರೆ ಕೆಲವು ಕಡೆ ಸರ್ಕಾರಿ ಜಮೀನುಗಳು ಮಾಯವಾಗಿ ಅಂತಸ್ತಿನ ಮಹಡಿಗಳು, ಬಡಾವಣೆಗಳು ನಿರ್ಮಾಣವಾಗಿವೆ ಇಂತಹವುಗಳಿಗೆ ಕುಮ್ಮಕ್ಕು ನೀಡುವ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈ ಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಲೂರು ತಾಲೂಕಿನಲ್ಲಿ ಅಕ್ರಮ ಸರ್ಕಾರಿ ಜಮೀನು ಒತ್ತುವರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ನಾಗನಾಳ ಮುನಿಯಪ್ಪ ಉದ್ದೇಶಿಸಿ ಮಾತನಾಡಿ, ಮಾಲೂರು ತಾಲ್ಲೂಕಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಗಳು ಹೆಚ್ಚುತ್ತಿದ್ದು ಪರಿಣಾಮಕಾರಿಯಾಗಿ ಬೆಳೆಯುತ್ತಿರುವುದ ರಿಂದ ಭೂ ಮಾಫಿಯಾಗಳು ಮತ್ತು ಪ್ರಭಾವಿಗಳು ಸರ್ಕಾರಿ ಜಮೀನುಗಳನ್ನು ಅಕ್ರಮ ಪಡಿಸಿಕೊಳ್ಳುತ್ತಿದ್ದಾರೆ. ವರ್ಷಗಳಿಂದ ನೆನೆ ಗುದಿಗೆ ಬಿದ್ದಿರುವ ಡಾ. ಬಿ ಆರ್ ಅಂಬೇಡ್ಕರ್ ವಿದ್ಯಾರ್ಥಿನಿಲಯದ ಕಾಮಗಾರಿಯನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು. ಕಸಬಾ ಹೋಬಳಿ ನೀಲಕಂಠ ಅಗ್ರಹಾರ ಬಳಿ ಸಂತೆ ಮೈದಾನ ದಿಂದ ಪುರಸಭೆ ಒಕ್ಕಲೆಬ್ಬಿಸಿ ಸ್ಥಳ ಸೂಚಿಸಿರುವ ನಿರಾಶ್ರಿತ ಗುಡಿಸಿಲು ನಿವಾಸಿಗಳಿಗೆ ಹಕ್ಕು ಪತ್ರ
ನೀಡಬೇಕು. ಅಕ್ರಮ ಸಕ್ರಮಕ್ಕೆ ಸಲ್ಲಿಸಿರುವ 50, 53,57ಅರ್ಜಿಗಳಲ್ಲಿ ಅರ್ಹ ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ಜಮೀನು ಮಂಜೂರು ಸೇರಿದಂತೆ ತಾಲ್ಲೂಕಿನ ನಮ್ಮ ಸಂಘಟನೆಯು ಬೇಡಿಕೆ ಇಟ್ಟಿರುವ ಸಮಸ್ಯೆಗಳಿಗೆ ತಾಲ್ಲೂಕು ಆಡಳಿತ ಸ್ಪಂದನೆ ನೀಡಿ ಹಂತ ಹಂತವಾಗಿ ಬಗೆಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಸಂಚಾಲಕ ಎಸ್.ಎಂ.ವೆಂಕಟೇಶ್, ಸಂಘಟಿಕರಾದ ದೊಡ್ಡಕಲ್ಲಹಳ್ಳಿ ನಾರಾಯಣಸ್ವಾಮಿ, ತಿರುಮಲೇಶ್, ಅಂಗಶೆಟ್ಟಿಹಳ್ಳಿ ನಾರಾಯಣಸ್ವಾಮಿ, ನೀಲಕಂಠ ಅಗ್ರಹಾರ ಶಾಮಣ್ಣ, ವೆಂಕಟೇಶಪ್ಪ, ಹನುಮಂತನಗರ ಶಂಕರ್, ಯಶವಂತಪುರ ಮುನಿರಾಜಪ್ಪ, ಉಳ್ಳೇರಹಳ್ಳಿ ಮುನಿರಾಜು, ಹಾರೋಹಳ್ಳಿ ಮುನಿರಾಜು, ರಾಹುಲ್ ಚಂದ್ಇತರರು ಭಾಗವಹಿಸಿದ್ದರು.