ಸುದ್ದಿಮೂಲ ವಾರ್ತೆ
ರಾಮನಗರ,ಜೂ.20 : ಕೇಂದ್ರ ಸರ್ಕಾರದ ಬಳಿ ಚರ್ಚಿಸದೆ ಗ್ಯಾರಂಟಿಗಳನ್ನು ಘೋಷಿಸಿರುವ ಕಾಂಗ್ರೆಸ್ ಇದೀಗ ಗ್ಯಾರಂಟಿಗಳನ್ನು ಈಡೇರಿಸಲಾಗದೆ ಕೇಂದ್ರವನ್ನು ದೋಷಿಸುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥನಾರಾಯಣ ಗೌಡ ಹರಿಹಾಯ್ದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸಲಾಗದ ಕಾಂಗ್ರೆಸ್ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರತಿಭಟನೆಯ ನಾಟಕವಾಡುತ್ತಿದೆ ಎಂದು ದೂರಿದರು.
10 ಕೆಜಿ ಅಕ್ಕಿ ಕೊಡುವ ಗ್ಯಾರಂಟಿ ನೀಡುವ ಮುನ್ನ ಕಾಂಗ್ರೆಸ್ ಅಕ್ಕಿಯ ಲಭ್ಯತೆಯ ಬಗ್ಗೆ ಕೇಂದ್ರ ಸರ್ಕಾರದ ಬಳಿ ಚರ್ಚೆ ಮಾಡಲಿಲ್ಲ, ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವುದು ಸರಿಯಲ್ಲ. ಅಕ್ಕಿ ಬೇಕು ಎಂಬ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಾದೇಶಿಕ ಅಧಿಕಾರಿಯೊಂದಿಗೆ ಪತ್ರ ವ್ಯವಹಾರ ನಡೆಸುವ ಬದಲು ಕೇಂದ್ರದ ಜೊತೆ ಪತ್ರ ವ್ಯವಹಾರ ನಡೆಸಬೇಕಿತ್ತು. ಅಕ್ಕಿ ದಾಸ್ತಾನು ವಿಷಯವಾಗಿ ಕೇಂದ್ರ ಸರ್ಕಾರದ ನಿರ್ಣಯಗಳ ಬಗ್ಗೆ ಪ್ರಾದೇಶಿಕ ಅಧಿಕಾರಿಗಳ ಬಳಿ ಮಾಹಿತಿ ಕೊರತೆ ಇತ್ತು ಎಂದರು.
ಅನ್ಯ ರಾಜ್ಯಗಳಿಂದ ಅಕ್ಕಿ ಖರೀದಿಸಿ ಕಮೀಷನ್ ಹೊಡೆಯುವ ಹುನ್ನಾರ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ಹಲವು ಬಾರಿ ಮುಂಗಡ ಪತ್ರ ಮಂಡಿಸಿರುವ, ಅನುಭವಿ ಮುಖ್ಯಮಂತ್ರಿಗಳಿಗೆ ಅಕ್ಕಿ ಎಲ್ಲಿಂದ ತರಬೇಕು ಎಂದು ಗೊತ್ತಿಲ್ಲವೆ. ಸ್ಥಳೀಯ ಅಕ್ಕಿ ಗಿರಣಿಗಳ ಬಳಿ ಮಾತುಕತೆ ನಡೆಸಬಹುದು. ಆದರೆ ಕಾಂಗ್ರೆಸ್ ಸರ್ಕಾರ ಇದನ್ನು ಮಾಡುತ್ತಿಲ್ಲ. ಕೇವಲ ರಾಜಕಾರಣ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮೋಹನ್, ಪ್ರಸಾದ್ಗೌಡ, ಗೌತಮ್ ಮರಿಲಿಂಗೇಗೌಡ, ಆರ್.ವಿ.ಸುರೇಶ್, ಜಿ.ವಿ.ಪದ್ಮನಾಭ್, ರುದ್ರದೇವರು ಮುಂತಾದವರು ಉಪಸ್ಥಿತರಿದ್ದರು.