ವಿಜಯಪುರ: ರಾಜ್ಯದ ಬಡವರಿಗೆ ತಿಂಗಳಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಕೊಡಲು ಸರಕಾರ ಬದ್ಧವಾಗಿದೆ. ಆದರೆ ಈ ವಿಚಾರದಲ್ಲಿ ಕೇಂದ್ರ ಸರಕಾರವು ರಾಜಕೀಯ ಮಾಡುತ್ತಿದ್ದು, ಬಡವರ ವಿರೋಧಿಯಂತೆ ವರ್ತಿಸುತ್ತಿದೆ. ಹೀಗಾಗಿ ಸ್ವಲ್ಪ ತಡವಾಗಿಯಾದರೂ ಸರಿಯೇ, ಅನ್ನಭಾಗ್ಯ ಯೋಜನೆ ಜಾರಿಗೆ ಬಂದೇಬರುತ್ತದೆ ಎಂದು ಭಾರೀ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಗುರುವಾರ ಇಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಅಕ್ಕಿ ಖರೀದಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಮೊದಲಿನಿಂದಲೂ ಕೇಂದ್ರ ಸರಕಾರದೊಂದಿಗೆ ವ್ಯವಹರಿಸುತ್ತಲೇ ಇದೆ. ಮೊದಲು ಕೇಂದ್ರ ಸರಕಾರ ಕೂಡ ತನ್ನಲ್ಲಿ 7.5 ಲಕ್ಷ ಟನ್ ಅಕ್ಕಿ ದಾಸ್ತಾನಿದ್ದು, ರಾಜ್ಯಕ್ಕೆ ಅಗತ್ಯವಿರುವಷ್ಟು ಅಕ್ಕಿ ಕೊಡುವುದಾಗಿ ಹೇಳಿತ್ತು. ಆದರೆ ಈಗ ಅದು ತದ್ವಿರುದ್ಧ ಧೋರಣೆ ತಾಳಿದೆ. ನಾವೇನೂ ಅವರನ್ನು ಉಚಿತವಾಗಿ ಅಕ್ಕಿ ಕೊಡಿ ಎಂದು ಕೇಳಿರಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ಸರಕಾರ ಯೋಚಿಸುತ್ತಿದೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೇಂದ್ರ ಸಚಿವ ಅಮಿತ್ ಷಾ ಅವರೊಂದಿಗೆ ಈ ಸಂಬಂಧ ಮಾತುಕತೆ ನಡೆಸಿದ್ದಾರೆ. ಕೇಂದ್ರ ಸರಕಾರದ ಬೇರೆಬೇರೆ ಸಂಸ್ಥೆಗಳನ್ನೂ ಈ ಸಂಬಂಧ ಸಂಪರ್ಕಿಸಲಾಗಿದೆ. ಈ ಎಲ್ಲ ಕಾರಣಗಳಿಂದ ಅನ್ನಭಾಗ್ಯ ಯೋಜನೆಯ ಜಾರಿ ಸ್ವಲ್ಪ ವಿಳಂಬವಾಗುತ್ತಿದೆ. ಆದರೆ, ಜಾರಿಗೆ ಬರುವುದರಲ್ಲಿ ಯಾವ ಅನುಮಾನವೂ ಇಲ್ಲ. ಜನರಿಗೆ ಕೊಟ್ಟ ಮಾತಿನಂತೆ ನಮ್ಮ ಸರಕಾರ ನಡೆದುಕೊಳ್ಳಲಿದೆ ಎಂದು ಅವರು ವಿವರಿಸಿದರು.
ಜುಲೈ ತಿಂಗಳಲ್ಲಿ ದೆಹಲಿಗೆ
ಭಾರೀ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಸಮಗ್ರ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಇದು ಈ ತಿಂಗಳಲ್ಲಿ ಅಂತಿಮ ರೂಪ ಪಡೆಯಲಿದೆ. ಬಳಿಕ, ಜುಲೈ ತಿಂಗಳಲ್ಲಿ ದೆಹಲಿಗೆ ತೆರಳಿ, ಕೇಂದ್ರ ಕೈಗಾರಿಕಾ ಸಚಿವರ ಜತೆ ಕೂಲಂಕಷವಾಗಿ ಚರ್ಚಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಎನ್ನುವ ಬಗ್ಗೆ ಸ್ಪಷ್ಟ ಕಲ್ಪನೆ ಸರಕಾರಕ್ಕಿದೆ. ಹಾಗೆಯೇ ಕೇಂದ್ರದಿಂದ ನಮಗೆ ದೊರೆಯಬಹುದಾದ ಸಹಾಯ ಮತ್ತು ನಮ್ಮಲ್ಲಿ ಯಾವ್ಯಾವ ಉದ್ದಿಮೆಗಳಿಗೆ ಹೇರಳ ಅವಕಾಶಗಳಿವೆ ಎನ್ನುವುದನ್ನೆಲ್ಲ ಚರ್ಚಿಸಲಾಗುವುದು. ಇದರಿಂದ ರಾಜ್ಯದ ಎಲ್ಲೆಡೆಗಳಲ್ಲೂ ಉದ್ದಿಮೆಗಳು ಬರಲು ಸಹಾಯವಾಗಲಿದೆ ಎಂದು ಪಾಟೀಲ್ ನುಡಿದರು.
ವಿದ್ಯುತ್ ಬೆಲೆ ಏರಿಕೆ- ಸಿಎಂ ಜತೆ ಚರ್ಚೆ
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಇತ್ತೀಚೆಗೆ ವಿದ್ಯುತ್ ಬೆಲೆ ಏರಿಸಿದ್ದು, ಇದರ ಬಗ್ಗೆ ಕೈಗಾರಿಕೋದ್ಯಮಿಗಳು ಕಳವಳ ಹೊರಹಾಕಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ. ಆದ್ದರಿಂದ ಕೈಗಾರಿಕೋದ್ಯಮಿಗಳು ಯಾವುದೇ ಪ್ರತಿಕೂಲ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ವಿದ್ಯುತ್ ದರ ಏರಿಕೆ ಸರಕಾರದ ತೀರ್ಮಾನವಲ್ಲ. ಕೆಇಆರ್ಸಿ ಸ್ವಾಯತ್ತ ಸಂಸ್ಥೆಯಾಗಿದ್ದು, ಅದು ಕಾಲಕಾಲಕ್ಕೆ ಬೆಲೆ ಪರಿಷ್ಕರಣೆ ಮಾಡುತ್ತಲೇ ಇರುತ್ತದೆ. ಮುಂದೆಯೂ ಅದು ಇದನ್ನು ಮಾಡಲಿದೆ. ಈಗಿನ ಬೆಲೆ ಏರಿಕೆಯು ಕಾಂಗ್ರೆಸ್ ಸರಕಾರ ಬರುವುದಕ್ಕೂ ಮೊದಲೇ ಆಗಿದ್ದ ತೀರ್ಮಾನವಾಗಿದೆ. ಇದನ್ನು ಉದ್ಯಮಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.