ಸುದ್ದಿಮೂಲ ವಾರ್ತೆ
ತುಮಕೂರು,ಜೂ.22: ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ಸ್ಮಾರ್ಟ್ ಸಿಟಿ, ಟೂಡಾ ಮತ್ತು ಪಿಡಬ್ಲ್ಯೂಡಿ ಇಲಾಖೆಗಳಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಯಾವುದೇ ಯೋಜನೆಗಳ ಅನುಷ್ಠಾನವನ್ನು ಮುಂದಿನ 50 ವರ್ಷಗಳ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಬೇಕು ಮತ್ತು ಯೋಜನೆಗಳು ಜನರಿಗೆ ಸಂಪೂರ್ಣವಾಗಿ ಉಪಯೋಗವಾಗಬೇಕು ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸ್ಮಾರ್ಟ್ ಬಸ್ನಿಲ್ದಾಣ ಮುಂದಿನ ನವೆಂಬರ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಜನರಿಗೆ ಅನುಕೂಲವಾಗುವಂತೆ ವೈಫೈ ಸಂಪರ್ಕ ಸೇರಿದಂತೆ ವಿನೂತನ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಬಸ್ ನಿಲ್ದಾಣದಲ್ಲಿ ಅಳವಡಿಸುವಂತೆ ಕೆಎಸ್ಆರ್ಟಿಸಿ ಮತ್ತು ಸ್ಮಾರ್ಟ್ ಸಿಟಿ ಎಂಡಿ ಅವರಿಗೆ ಸೂಚಿಸಿದರು.
ಸ್ಮಾರ್ಟ್ ಸಿಟಿಯಿಂದ ನಗರದಲ್ಲಿ ನಿರ್ಮಾಣವಾಗಿರುವ ‘ಸೆಂಟ್ರಲೈಸ್ಡ್ ಸೆಂಟರ್’ಅನ್ನು ಕಾಮಗಾರಿ ಪೂರ್ಣಗೊಂಡ ನಂತರ ಪೊಲೀಸ್ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಿದರು. ಈಗ ಸ್ಮಾರ್ಟ್ ಸಿಟಿ ವತಿಯಿಂದ 6 ಪ್ರಮುಖ ಕೇಂದ್ರಗಳಲ್ಲಿ ಮಾತ್ರ ವೈಫೈ ಸಂಪರ್ಕ ಇದ್ದು, ಇದನ್ನು ಹೆಚ್ಚಿಸುವಂತೆ ಸ್ಮಾರ್ಟ್ ಸಿಟಿ ಎಂಡಿ ರಂಗಸ್ವಾಮಿ ಅವರಿಗೆ ಸೂಚಿಸಿದರು.
ತುಮಕೂರು ನಗರವನ್ನು ಪ್ರವೇಶಿಸುವ ರಸ್ತೆಯ ಅಕ್ಕ-ಪಕ್ಕ ಮತ್ತು ಮಧ್ಯ ಭಾಗಗಳಲ್ಲಿ ಹಸಿರೀಕರಣವಾಗಬೇಕು. ರಸ್ತೆಯ ಉಭಯ ಬದಿಗಳಲ್ಲಿ ಬೋಗನ್ ವಿಲ್ಲಾ ಗಿಡಗಳನ್ನು ನೆಡುವ ಮೂಲಕ
ಹಾಗೂ ಹೂ ಗಿಡಗಳನ್ನು ಬೆಳೆಸುವ ಮೂಲಕ ನಗರದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. “ಕಲ್ಪತರು ನಾಡಿಗೆ ಪ್ರವೇಶ” ಎಂಬ ನಾಮಫಲಕವಿರಬೇಕು ಎಂದು ಸೂಚಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಗುಣಮಟ್ಟವುಳ್ಳ ಜಿಮ್ ನಿರ್ಮಿಸಬೇಕು. ಅತ್ಯಾಧುನಿಕ ಅಂಬ್ಯುಲೆನ್ಸ್ ಸೇವೆ, ಧೋಬಿಘಾಟ್ನಲ್ಲಿ ಅತ್ಯಾಧುನಿಕ ಬಟ್ಟೆ ತೊಳೆಯುವ ಯಂತ್ರ ಅಳವಡಿಕೆ, ಅಮಾನಿಕೆರೆ ಮುಂಭಾಗದ ಗ್ಲಾಸ್ ಹೌಸ್ ಸುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು
ತುಮಕೂರಿನಲ್ಲಿ ಟೂಡಾ ವತಿಯಿಂದ ಜನರಿಗೆ ಕಡಿಮೆ ದರದಲ್ಲಿ ನಗರದಿಂದ 2 ಕಿ.ಮೀ. ದೂರದಲ್ಲಿ ಕನಿಷ್ಠ 1 ಸಾವಿರ ನಿವೇಶನ ರೂಪಿಸುವ ಸಂಬಂಧ ಇನ್ನೊಂದು ವಾರದೊಳಗಾಗಿ ಕರಡು ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಟೂಡಾ ಆಯುಕ್ತ ಜಾಧವ್ ಅವರಿಗೆ ಸಚಿವರು ಸೂಚಿಸಿದರು.
ವಸಂತ ನರಸಾಪುರ ಕೈಗಾರಿಕಾ ಪ್ರದೇಶದವರೆಗೆ ಮೆಟ್ರೋ ರೈಲು ವಿಸ್ತರಿಸುವ ಯೋಜನೆಯಿದ್ದು, ಯೋಜನೆ ಜಾರಿಗೊಂಡಲ್ಲಿ ಈ ಪ್ರದೇಶವೊಂದರಲ್ಲೇ 5 ಲಕ್ಷದವರೆಗಿನ ಜನಸಂಖ್ಯೆಯನ್ನು ನಿರೀಕ್ಷಿಸಬಹುದಾಗಿದೆ. ಮುಂದಿನ 10 ವರ್ಷಗಳಲ್ಲಿ ತುಮಕೂರಿನ ಜನಸಂಖ್ಯೆ 25 ಲಕ್ಷ ದಾಟುತ್ತದೆ.
ಬೆಳೆಯುವ ಜನಸಂಖ್ಯೆಗೆ ಅನುಗುಣವಾಗಿ ನಗರದಲ್ಲಿ ಸುಸಜ್ಜಿತ ಬಡಾವಣೆ ಇರಬೇಕು. ಈ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಸೂಚಿಸಿದರು.