ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.22: ದ್ವಿತೀಯ ಕೃಷಿಯ ಮೂಲಕ ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಇಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ನವದೆಹಲಿಯ ಭಾರತೀಯ ವಿಸ್ತರಣಾ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜಿಕೆವಿಕೆ ಆವರಣದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ಹಮ್ಮಿಕೊಳ್ಳಲಾದ “ಭಾರತೀಯ ವಿಸ್ತರಣಾ ಶಿಕ್ಷಣ ಸಂಸ್ಥೆ, ರಾಷ್ಟ್ರೀಯ ಸಮ್ಮೇಳನ 2023” ಉದ್ಘಾಟಿಸಿ ಮಾತನಾಡಿದರು.
ನರೇಂದ್ರ ಮೋದಿಯವರು ರೈತರ ಆದಾಯ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದಾರೆ. ಸಣ್ಣ ರೈತರು ಜಾಗತಿಕ ಮಾರುಕಟ್ಟೆ ತಲುಪಲು ಮಾರುಕಟ್ಟೆ, ಸಾರಿಗೆ, ಮೂಲಭೂತ ಸೌಕರ್ಯ, ಶಿಥಲೀಕರಣಕ್ಕೆ ಸಂಬಂಧಿಸಿದಂತೆ ಸವಾಲನ್ನು ಎದುರಿಸಬೇಕಾಗುತ್ತದೆ. ಕೃಷಿಗೆ ಸಂಬಂಧಿಸಿದಂತೆ ನೀತಿ ನಿರೂಪಣೆಯಲ್ಲಿ ಲೋಪವಿದೆ. ಲೋಪವನ್ನು ಸರಿಪಡಿಸಲು ಸರ್ಕಾರ, ವಿಶ್ವವಿದ್ಯಾಲಯ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಒಟ್ಟಿಗೆ ಚರ್ಚಿಸಬೇಕು. ರಾಜ್ಯ ಸರ್ಕಾರದ ಸಭೆಗಳಲ್ಲಿ ಕೃಷಿ ನೀತಿ ನಿರೂಪಣೆಯಲ್ಲಿನ ಲೋಪಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಈ ರಾಷ್ಟ್ರೀಯ ಸಮ್ಮೇಳನವು ವಿಜ್ಞಾನಿಗಳಿಗೆ ಮತ್ತು ಕ್ಷೇತ್ರ ವಿಸ್ತರಣಾಧಿಕಾರಿಗಳಿಗೆ ದ್ವಿತೀಯ ಕೃಷಿ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಉಪಕ್ರಮಗಳ ಕುರಿತು ಚರ್ಚಿಸಲು ಉತ್ತಮ ವೇದಿಕೆಯಾಗಿದೆ ಎಂದರು.
ಹಿಂದಿನ ಕಾಲದಲ್ಲಿ ಆಹಾರದ ಕೊರತೆ ಇತ್ತು. ಈಗ ನಾವು ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದೇವೆ. ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳನ್ನು ರಪ್ತು ಮಾಡುತ್ತಿದ್ದೇವೆ. ಕೃಷಿ ಮಾರುಕಟ್ಟೆಗೆ ಮತ್ತು ಕೃಷಿ ವ್ಯವಹಾರಗಳಿಗೆ ಹೆಚ್ಚಿನ ಮಹತ್ವ ಕ್ರಮಗಳನ್ನು ಅನುಸರಿಸಬೇಕು ಎಂದರು.
ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರದ ಸಿಇಒ ಡಾ. ಅಶೋಕ್ ಎಂ. ದಳವಾಯಿ ಅವರು ಮಾತನಾಡಿ ಭಾರತೀಯರು ವಿಜ್ಞಾನಕ್ಕೆ ಪ್ರಾಮುಖ್ಯತೆ ನೀಡಿದ್ದು, ತಾಂತ್ರಿಕತೆಗೆ ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ತಾಂತ್ರಿಕತೆಗೆ ಹೆಚ್ಚಿನ ಮಹತ್ವ ಕೊಟ್ಟು ವಾಣಿಜ್ಯೀಕರಣಕ್ಕೆ ಪ್ರಾಶಸ್ತ್ಯ ನೀಡಿದ್ದಾರೆ. ನಾವು ಕೂಡ ಅದೇ ಮಾದರಿಯನ್ನು ಅನುಸರಿಸಬೇಕು. ಸಂಶೋಧನೆಗೆ ನೀಡುವ ಪ್ರಾಮುಖ್ಯತೆಯನ್ನು ವಿಸ್ತರಣೆಗೂ ನೀಡಬೇಕು ಎಂದು ತಿಳಿಸಿದರು.
ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್.ವಿ. ಸುರೇಶ ಅವರು ಮಾತನಾಡಿ, ಸಮ್ಮೇಳನದ ಪ್ರಮುಖ ಉದ್ದೇಶವೆಂದರೆ ಸೆಕೆಂಡರಿ (ದ್ವಿತೀಯ) ಕೃಷಿಯನ್ನೊಳಗೊಂಡ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಚರ್ಚಿಸುವುದು, ರೈತ ಉತ್ಪಾದಕ ಸಂಸ್ಥೆಗಳು, ಉದ್ಯಮಶೀಲತೆ ಅಭಿವೃದ್ಧಿ ವಿಚಾರಗಳ ಕುರಿತು ನೂತನ ಪ್ರಯತ್ನಗಳು, ಸಿದ್ಧಾಂತಗಳು ಹಾಗೂ ಅನುಭವಗಳನ್ನು ಹಂಚಿಕೊಳ್ಳುವುದು ಮತ್ತು ವಿಸ್ತರಣಾ ತಂತ್ರಜ್ಞಾನಗಳನ್ನು ಅರ್ಥೈಸಿಕೊಂಡು ದ್ವಿತೀಯ ಕೃಷಿಯನ್ನೊಳಗೊಂಡ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವುದರ ಕುರಿತಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನವದೆಹಲಿಯ ಭಾರತೀಯ ಕೃಷಿ ಅನುಸಂದಾನ ಪರಿಷತ್ನ ಉಪ ಮಹಾ ನಿರ್ದೇಶಕರಾದ ಡಾ.ಯು.ಎಸ್. ಗೌತಮ್, ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ವಿ. ಸುರೇಶ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ, ನವದೆಹಲಿಯ ಭಾರತೀಯ ಕೃಷಿ ಅನುಸಂದಾನ ಪರಿಷತ್ನ ಉಪ ಮಹಾ ನಿರ್ದೇಶಕರಾದ ಡಾ.ಯು.ಎಸ್. ಗೌತಮ್, ಭಾರತೀಯ ವಿಸ್ತರಣಾ ಶಿಕ್ಷಣ ಸಂಘ(ಕರ್ನಾಟಕ ಅಧ್ಯಾಯ), ಡಾ. ಜಿ. ಈಶ್ವರಪ್ಪ, ಹೈದರಾಬಾದ್ (ಮ್ಯಾನೇಜ್)ನ ಮಹಾನಿರ್ದೇಶಕರಾದ ಡಾ.ಪಿ. ಚಂದ್ರಶೇಖರ್ ಇತರೆ ಗಣ್ಯರು ಉಪಸ್ಥಿತರಿದ್ದರು.

