ಸುದ್ದಿಮೂಲ ವಾರ್ತೆ
ಮೈಸೂರು,ಜೂ.22: ರಾಜ್ಯ ಸರ್ಕಾರ ಹೆಚ್ಚಿಸಿರುವ ವಿದ್ಯುತ್ ಶುಲ್ಕ ಖಂಡಿಸಿ ಗುರುವಾರ ಜಿಲ್ಲೆಯ ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಕೆಲ ಕಾಲ ನಗರದ ದೇವರಾಜ ಅರಸ್ ರಸ್ತೆಯಲ್ಲಿ ಇರುವ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟಸಿದರು.
ಅರಸು ರಸ್ತೆಯಲ್ಲಿ ಸೇರಿದ್ದ ಉದ್ಯಮಿಗಳು ಸಭೆ ನಡೆಸಿ ಕೂಡಲೇ ಏರಿಕೆ ಮಾಡಿರುವ ಆದೇಶವನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಈ ವೇಳೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಕೆ.ಬಿ.ಲಿಂಗರಾಜು ಮಾತನಾಡಿ, ವಿದ್ಯುತ್ ದರ ಹೆಚ್ಚಳದಿಂದ ಉದ್ದಿಮೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದರಿಂದ ಉತ್ಪಾದನಾ ವೆಚ್ಚವು ಹೆಚ್ಚಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಮುಚ್ಚುವ ಸಂಭವ ಎದುರಾಗುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲೆಯ ದೇವರಾಜ ಅರಸು ಅಂಗಡಿ ಮಾಲೀಕರು ಮತ್ತು ಬಾಡಿಗೆದಾರರ ಸಂಘ, ಜಿಲ್ಲಾ ಉಡುಪು ತಯಾರಕರ ಸಂಘ, ದೇವರಾಜ ಮಾರುಕಟ್ಟೆ ಅಂಗಡಿ ಮಾಲೀಕರ ಸಂಘ, ಸಯ್ಯಾಜಿರಾವ್ ರಸ್ತೆ, ಆಶೋಕ ರಸ್ತೆ ವ್ಯಾಪಾರಿಗಳ ಸಂಘ, ಹೆಬ್ಬಾಳು ಕೈಗಾರಿಕಾ ವಸಾಹತು ಸಂಘ, ನಂಜನಗೂಡು ಕೈಗಾರಿಕೆಗಳ ಸಂಘ, ಕೆಐಡಿಬಿ ಪ್ರದೇಶ ಉತ್ಪಾದಕರ ಸಂಘ, ಮೈಸೂರು ಗ್ರಾಹಕರ ಪರಿಷತ್, ಹೊಟೇಲ್ ಮಾಲೀಕರ ಸಂಘ, ಜಿಲ್ಲಾ ವಿತರಕರ ಸಂಘ, ಮೈಸೂರು ಪೆಟ್ರೋಲಿಯಂ ವಿತರಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.