ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಜೂ 22 : ಕಾಡುಗುಡಿ ಮತ್ತು ಹಗದೂರು ವಾರ್ಡ್ ಗಳಲ್ಲಿ ಅನಧಿಕೃತವಾಗಿ ಕೊರೆಯುತ್ತಿರುವ ಕೊಳವೆ ಬಾವಿಗಳನ್ನು ತಡೆಯುವಂತೆ ಭೀಮ್ ಪ್ರಜಾ ಸಂಘದ ಕಾರ್ಯಕರ್ತರು ವೈಟ್ ಫೀಲ್ಡ್ ನ ವಿಜಯನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಭೀಮ್ ಪ್ರಜಾ ಸಂಘದ ರಾಜ್ಯಾಧ್ಯಕ್ಷ ವೈಟ್ ಫೀಲ್ಡ್ ಮುರುಗೇಶ್ ಮಾತನಾಡಿ, ಸರ್ಕಾರ ನಿಯಮದ ಪ್ರಕಾರ 250 ಮೀಟರ್ ಅಂತರದಲ್ಲಿ ಕೊಳವೆ ಬಾವಿ ಕೊರೆಯಬೇಕು. ಆದರೆ ಬಿಲ್ಡರ್ ಗಳು ತಮಗೆ ಇಷ್ಟ ಬಂದಂತೆ 250 ಮೀಟರ್ ಒಳಗೆ ಅಕ್ರಮವಾಗಿ ಕೊಳವೆ ಬಾವಿ ಕೊರೆಸುತ್ತಿದ್ದಾರೆ. ಸಾರ್ವಜನಿಕರಿಗಾಗಿ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಅಂಬೇಡ್ಕರ್ ಗುಟ್ಟದಲ್ಲಿ ಸರ್ಕಾರದ ಕೊಳವೆ ಬಾವಿ ಕೊರೆಯಲಾಗಿದೆ. ಈ ಕೊಳವೆ ಬಾವಿ ಪಕ್ಕದಲ್ಲಿಯೇ ಬಿಲ್ಡರ್ ಗಳು ಮೂರು ಕೊಳವೆ ಬಾವಿ ಕೊರೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕ್ರಮವಾಗಿ ಕೊಳವೆ ಬಾವಿ ಕೊರೆಯುತ್ತಿದ್ದರೂ ಬಿಬಿಎಂಪಿಯ ಅಧಿಕಾರಿಗಳು ಬಿಲ್ಡರ್ ಗಳಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿದ್ದಾರೆ. ಕಾಡುಗುಡಿ ಹಾಗೂ ಹಗದೂರು ವಾರ್ಡ್ ಹಲವು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈ ಬಗ್ಗೆ ಲೋಕಯುಕ್ತರಿಗೆ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ದೂರು ನೀಡಲಾಗಿದೆ ಎಂದು ಹೇಳಿದರು.