ಇಲಕಲ್ಲ,ಜೂ.25:ಬೇಡಜಂಗಮ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ ರಚನೆಗೆ ಇಲಕಲ್ಲ ಪಟ್ಟಣದಲ್ಲಿ ಭಾನುವಾರ ನಡೆದ ಬೇಡಜಂಗಮ ಮೀಸಲಾತಿ ಹೋರಾಟದ ಚಿಂತನ ಮಂಥನ ಸಭೆಯಲ್ಲಿ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಯಿತು.
ಇಲಕಲ್ಲ ಪಟ್ಟಣದಲ್ಲಿರುವ ಮಾರ್ಗದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಬೇಡಜಂಗಮ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಕುರಿತು ವಿವಿಧ ಮಠಾಧೀಶರರು ಮತ್ತು ಸಮಾಜದ ಮುಖಂಡರು ಸಮಗ್ರವಾಗಿ ಚರ್ಚೆ ನಡೆಸಿ ಈ ಕುರಿತು ಸೂಕ್ತ ನಿರ್ಧಾರ ಕೈಗೊಂಡರು.
ಮಾರ್ಗದರ್ಶನ ಶಿಕ್ಷಣ ಸಂಸ್ಥೆಯ ನೇತಾರರಾದ ವೀರೇಶ್ ಕೂಡ್ಲಿಗಿ ಮಠ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ಬೇಡಜಂಗಮ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟವು ಯಾವ ಸಂಘಟನೆಗೂ ಪರ್ಯಾಯವಲ್ಲ. ಈ ಸಂಘಟನೆಯು ರಾಷ್ಟ್ರಮಟ್ಟದ ಸಂಘಟನೆ. ಬೇಡಜಂಗಮ ಸಮಾಜದ ಎಲ್ಲಾ ಸಂಘಟನೆಗಳು ಸಮಾಜದ ಹಿತಾಸಕ್ತಿಗಾಗಿ ಹೋರಾಡುತ್ತಿವೆ. ಅಖಿಲ ಭಾರತ ಬೇಡಜಂಗಮ ಸಮಾಜದ ಮುಖಂಡರಾದ ಡಾ.ಎಂ.ಪಿ. ದಾರು ಕೇಶ್ವರಯ್ಯ ಮತ್ತು ಶ್ರೀಮತಿ ಸುಜಾತ ಅವರ ಶ್ರಮ ಜನಾಂಗಕ್ಕೆ ಮುಡುಪಾಗಿದೆ. ಈ ದಂಪತಿಗಳ ರೀತಿಯಲ್ಲಿ ಅನೇಕರು ಸಮಾಜದ ಹಿತಕ್ಕಾಗಿ ನಿರಂತರ ಶ್ರಮಿಸುತ್ತಿದ್ದಾರೆ. ಕೆಲವರು ತೆರೆಮರೆಯಲ್ಲಿ ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.
ಈ ಸಭೆಯಲ್ಲಿ ಪಾಲ್ಗೊಂಡಿದ್ದ ಅನೇಕರು ಸಮಾಜದ ಸಂಘಟನೆಯ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಜ್ಯೋತಿಷ್ಯರತ್ನ, ತಾಳಿಕೋಟೆಯ ರಾಮಲಿಂಗಯ್ಯ ಸ್ವಾಮಿ ಮತ್ತು ದೇವರಹಿಪ್ಪರಗಿ, ಕೊಡೇಕಲ್ ಶ್ರೀಗಳು ಆಶೀರ್ವಚನ ಮಾಡಿ, ಬೇಡಜಂಗಮರು ಪ್ರಭಲರು – ಪ್ರಭಾವಿಗಳೂ ಆಗಿದ್ದಾರೆ. ಆದರೆ, ಸರ್ಕಾರದಲ್ಲಿ ಅನೇಕ ಸೌಲಭ್ಯಗಳ ವಂಚಿತರಾಗಿದ್ದೇವೆ. ಸಮಾಜದ ಹಿತಾಸಕ್ತಿಗಾಗಿ – ಅಭಿವೃದ್ಧಿಗಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಒಗ್ಗೂಡಬೇಕಿದೆ ಎಂದರು.
ಸಾಸನೂರು ಮಹಾಂತಲಿಂಗ ಶಿವಾಚಾರ್ಯರು, ಚಬನೂರು, ಕೊಡತಿ ಕೋಲಾರ, ನಾವಲಗಿ ಸೇರಿ ವಿವಿಧ ಮಠಾಧಿಪತಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ನೂತನ ಬೇಡಜಂಗಮ ಸಂಘಟನೆಗಳಿಗೆ ರಾಷ್ಟ್ರೀಯ ಒಕ್ಕೂಟದ ಅಡಾಕ್ ಸಮಿತಿಯ ಅಧ್ಯಕ್ಷರಾಗಿ ವೀರೇಶ್ ಕೂಡ್ಲಿಗಿಮಠ್, ಕಾರ್ಯಾಧ್ಯಕ್ಷರಾಗಿ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರನ್ನು ಸರ್ವಾನುಮತದಿಂದ ಈ ಸಂದರ್ಭದಲ್ಲಿ ಆಯ್ಕೆಮಾಡಲಾಯಿತು. ಉಳಿದ ಪದಾಧಿಕಾರಿಗಳನ್ನು ಶೀಘ್ರದಲ್ಲೇ ನೇಮಕ ಮಾಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.