ಸುದ್ದಿಮೂಲ ವಾರ್ತೆ
ಆನೇಕಲ್, ಜೂ.25: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಾತೃ ವಾತ್ಸಲ್ಯ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.
ತಾಲ್ಲೂಕಿನ ಬನ್ನೇರುಘಟ್ಟ ಚಂಪಕಧಾಮ ದೇವಾಲಯದ ಸಮೀಪದಲ್ಲಿರುವ ರಂಗನಾಥ ಕಲ್ಯಾಣ ಮಂಟದದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು
ಕಾರ್ಯಕ್ರಮದಲ್ಲಿ ಕವಿ, ಸಾಹಿತಿ ಡಾ.ಸತ್ಯನಾರಾಯಣ ಮಾತನಾಡಿ, ಮಕ್ಕಳಿಗೆ ವಿದ್ಯೆ ಜೊತೆಗೆ ನಿಜ ಜೀವನದ ಕಷ್ಟಗಳನ್ನು ತಿಳಿಸಿ ಕೊಡಬೇಕು. ಮಕ್ಕಳು ಕನಸು ಕಾಣುವುದು ಬಹಳ ಮುಖ್ಯ. ಕೇವಲ ಅಂಕ ಪಡೆಯುವುದು ಮಾತ್ರವಲ್ಲ ಘನತೆಯಿಂದ ಬದುಕುವುದು ಮುಖ್ಯ ಎಂದು ಹೇಳಿದರು.
ಪೋಷಕರಿಗೆ ತಮ್ಮ ಮಕ್ಕಳ ಮೇಲೆ ಕೇವಲ ಅಂಕ ಗಳಿಸಿ ಎಂಬುದನ್ನೇ ಹೇರದೆ ಅವರು ಸುಸಂಸ್ಕೃತರಾಗಿ, ಸಭ್ಯಸ್ಥರಾಗಿ, ಸಮಾಜದಲ್ಲಿ ಮಾನವೀಯ ಮೌಲ್ಯಗಳೊಂದಿಗೆ ಬದುಕುವುದನ್ನು ಸಹ ಕಲಿಸಬೇಕು ಎಂದು ಕಿವಿಮಾತು ಹೇಳಿದರು.
ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ ಜಯಲಕ್ಷ್ಮಿ ಮಾತನಾಡುತ್ತಾ, ಎಸ್ಎಸ್ಎಲ್ಸಿ ತನಕ ಓದುವುದು ಎಷ್ಟು ಮುಖ್ಯವೋ ಇನ್ನೂ ಐದು ವರ್ಷಗಳ ಕಾಲ ಓದಿ ಪದವಿಗಳನ್ನು ಪಡೆಯುವುದು ಅಷ್ಟೇ ಮುಖ್ಯ. ಅದು ನಮ್ಮ ಜೀವನವನ್ನು ಬದಲಿಸುತ್ತದೆ. ತಂದೆ ತಾಯಿ ಆಶಯವನ್ನು ಪೂರೈಸುತ್ತದೆ. ನಾವು ಏನು ಆಗಬೇಕೆಂದು ನಿರ್ಧರಿಸುತ್ತದೆ ಎಂದು ಹೇಳಿದರು.
ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸಲು ಹೋಗಬೇಡಿ. ಅವರಿಗೆ ಕಷ್ಟದ ಬೆಲೆ ತಿಳಿಯಬೇಕು. ಕಷ್ಟದ ಜೀವನ ಕಂಡಾಗಲೇ ಸಹನೆ, ಪ್ರೀತಿ, ವ್ಯಕ್ತಿತ್ವ ವೃದ್ಧಿಯಾಗುತ್ತದೆ ಎಂದರು.
ಚಲನಚಿತ್ರ ನಟ ಪ್ರೇಮ್ , ಅತ್ತಿಬೆಲೆ ಸರ್ಕಲ್ ಇನ್ಸ್ಪೆಕ್ಟರ್ ವಿಶ್ವನಾಥ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಕೆ. ಶಿವಣ್ಣ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಗೋಪಾಲ್, ಸಂತ ಫಿಲಾಮಿನ ಶಾಲೆಯ ಮುಖ್ಯಸ್ಥ ಸುರೇಶ್, ಸಾಯಿಪ್ರಕಾಶ್, ಟ್ರಸ್ಟ್ನ ಅಧ್ಯಕ್ಷರಾದ ರಾಜಲಕ್ಷ್ಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.