ಸುದ್ದಿಮೂಲ ವಾರ್ತೆ
ರಾಮನಗರ, ಜೂ.25: ಜೂನ್ 27 ಮತ್ತು 28ರಂದು ನಗರದ ಟ್ರೂಪ್ಲೇನ್ನಲ್ಲಿರುವ ಶ್ರೀ ಬಂಡಿ ಮಹಾಕಾಳಿ ಅಮ್ಮನವರ ಗಿಂಡಿ ಕರಗ ಮಹೋತ್ಸವಕ್ಕೆ ಸಿದ್ದತೆಗಳು ಭರದಿಂದ ನಡೆಯುತ್ತಿದೆ.
ಹಲವಾರು ದಶಕಗಳಿಂದ ಶ್ರೀ ಬಂಡಿ ಮಹಾಕಾಳಿ ಅಮ್ಮನವರ ಉತ್ಸವ ಮತ್ತು ಗಿಂಡಿ ಕರಗ ಉತ್ಸವ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಬಹಳ ಹಿಂದೆ ಬರುತ್ತಿದ್ದ ಮಾರಣಾಂತಿಕ ಕಾಯಿಲೆಗಳಾದ ಕಾಲರಾ, ಪ್ಲೇಗು ಮತ್ತಿತರ ರೋಗಗಳಿಗೆ ಜನರು ತುತ್ತಾಗುತ್ತಿದ್ದರು. ಈ ರೋಗಗಳ ಉಪಶಮನಕ್ಕಾಗಿ ಇಲ್ಲಿ ನೆಲೆಸಿರುವ ಮಹಾಕಾಳಿ ಅಮ್ಮನವರಿಗೆ ಪೂಜೆ ಮಾಡಿದ ನಂತರ ಆಯುರ್ವೇದ ವೈದ್ಯಕೀಯ ಚಿಕಿತ್ಸೆಗಾಗಿ ಜನ ಬಂಡಿಯಲ್ಲಿ ಕೆರೆದುಕೊಂಡು ಹೋಗುತ್ತಿದ್ದರು. ಹೀಗೆ ತನ್ನನ್ನು ಪ್ರಾರ್ಥಿಸಿ ಚಿಕಿತ್ಸೆ ಪಡೆದ ಅನೇಕರನ್ನು ಸಾವಿನ ಅಂಚಿನಿಂದ ಪಾರು ಮಾಡಿದ್ದ ಕಾರಣ ಈ ತಾಯಿಗೆ ಬಂಡಿ ಮಹಾಕಾಳಿ ಎಂಬ ಹೆಸರು ಬಂದಿದೆ ಎಂದು ಸ್ಥಳೀಯರ ನಂಬಿಕೆ.
ರಾಮನಗರದಲ್ಲಿ ಆಷಾಢ ಮಾಸದಲ್ಲಿ ನಗರದಲ್ಲಿ ನೆಲೆಸಿರುವ ನವ ಶಕ್ತಿ ಮಾತೆಯರ ಕರಗ ಮಹೋತ್ಸವ ನಡೆಯುತ್ತಿದ್ದು, ಬಹುಶಃ ಮೈಸೂರು ದಸರಾದ ನಂತರ ಈ ಕರಗ ಮಹೋತ್ಸವಕ್ಕೆ ನಡೆಯುವ ವೈಭವೋಪೇತ ಅಲಂಕಾರಗಳು ನಾಡಿನ ಜನತೆಯ ಗಮನ ಸೆಳೆದಿದೆ ಎಂಬುದು ಸ್ಥಳೀಯ ಅನಿಸಿಕೆ.
ದೇವಸ್ಥಾನದ ಅರ್ಚಕ ಹಾಗೂ ಗಿಂಡಿ ಕರಗಧಾರಕ ಹರೀಶ್ ಸುದ್ದಿಗಾರರೊಂದಿಗೆ ಮಾತನಾಡಿ ಗಿಂಡಿ ಕರಗ ಮಹೋತ್ಸವದ ವೇಳೆ ಇಲ್ಲಿನ ಬಹುತೇಕ ಎಲ್ಲಾ ಜಾತಿ ಮತ್ತು ಧರ್ಮೀಯರು, ಭಾಷಿಕರು ಭಾಗವಹಿಸುತ್ತಾರೆ.
ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಇಷ್ಟಾರ್ಥಗಳನ್ನು ತಾಯಿ ಈಡೇರಿಸುತ್ತಿದ್ದಾಳೆ ಎಂದು ತಿಳಿಸಿದರು.
ಬಂಡಿ ಮಹಾಕಾಳಿ ಅಮ್ಮನವರ ಗಿಂಡಿ ಕರಗ ಮಹೋತ್ಸವದ ಅಂಗವಾಗಿ ನಡೆಯುವ ಅನ್ನ ಸಂರ್ತಪಣೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಎಂ.ಇ.ಐ.ಎಲ್ ಮಾಜಿ ಅಧ್ಯಕ್ಷ ಕೆ. ಶೇಷಾದ್ರಿ (ಶಶಿ) ನಗರಸಭಾ ಸದಸ್ಯರು ಭಾಗವಹಿಸಲಿದ್ದಾರೆ.