ಸುದ್ದಿಮೂಲ ವಾರ್ತೆ
ಕುಷ್ಟಗಿ,ಜೂ.24:ತಾಲೂಕಿನ ಚಳಗೇರಾದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಕಾಮಗಾರಿಗೆ ಶಾಸಕ ದೊಡ್ಡನಗೌಡ ಎಚ್. ಪಾಟೀಲರ ಅವರು ಭಾನುವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಚಳಗೇರಿ ಭಾಗದ ಪ್ರಮುಖರ ಬಹುದಿನಗಳ ಬೇಡಿಕೆಯಾಗಿದ್ದ ಗ್ರಾಮ ಪಂಚಾಯಿತಿಗೆ ಸುಸಜ್ಜಿತ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಪಂಚಾಯಿತಿ ಅಧ್ಯಕ್ಷ, ಸರ್ವ ಸದಸ್ಯರು ಹಾಗೂ ಪಿಡಿಓ ಅವರ ಪ್ರಯತ್ನದ ಫಲವಾಗಿ ಇಂದು ಚಾಲನೆ ಸಿಕ್ಕಿದೆ. ಅದೇರೀತಿ ಇದರೊಂದಿಗೆ ಗ್ರಾಮ ಪಂಚಾಯಿತಿಯ 2023-24 ನೇ ಸಾಲಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುದಾನದಡಿ ಭಾರತ ನಿರ್ಮಾಣ ಸೇವಾ ಕೇಂದ್ರ ಹಾಗೂ ಗ್ರಾಮೀಣ ಗೋದಾಮು ನೂತನ ಕಟ್ಟಡ ನಿರ್ಮಾಣವಾಗಲಿದೆ.
ಕಟ್ಟಡದ ಕಾಮಗಾರಿ ನಿಗದಿತ ಅವಧಿಯಲ್ಲಿ ಸುಸಜ್ಜಿತವಾಗಿ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಭೂಮಿಪೂಜೆ ಹಾಗೂ ಅಡಿಗಲ್ಲು ಕಾರ್ಯಕ್ರಮದಲ್ಲಿ ಚಳಗೇರಿ ಶ್ರೀಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಂತೇಶ್ ಹಡಪದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಪ್ರಮುಖರಾದ ವೆಂಕಪ್ಪಯ್ಯ ದೇಸಾಯಿ, ಅಭಿವೃದ್ಧಿ ಅಧಿಕಾರಿ ಬಸವರಾಜ ಸಂಕನೂರು, ಗ್ರಾಮ ಪಂಚಾಯತಿ ಸರ್ವ ಸದಸ್ಯರು ಸೇರಿದಂತೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಕೆ ಮಹೇಶ, ಬಸವರಾಜ ಹಳ್ಳೂರ್, ಫಕೀರಪ್ಪ ಚಳಗೇರಿ ವಕೀಲರು, ತುಕಾರಾಮ್ ಸುರ್ವೆ ಹಾಗೂ ಗ್ರಾಮದ ಗಣ್ಯರು ಹಾಜರಿದ್ದರು.