ಸುದ್ದಿಮೂಲ ವಾರ್ತೆ
ಮಂಡ್ಯ, ಜೂ 26 : ದೇಶಿಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವಲ್ಲಿ ಸರ್ಕಾರ ವಿಫಲವಾಗಿವೆ ಎಂದು ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು.
ನಗರದ ಪಿಇಎಸ್ ಕಾಲೇಜಿನ ಸ್ವಾಮಿವಿವೇಕಾನಂದ ರಂಗಮಂದಿರದಲ್ಲಿ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಆಯೋಜಿಸಿದ್ದ 54 ನೇ ರಾಷ್ಟ್ರೀಯ ನೃತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ನಮ್ಮ ಭಾಷೆ, ಕಲೆ, ನೃತ್ಯ, ಸಂಗೀತವನ್ನು ಪ್ರೀತಿಸುವ ವಿದೇಶಿಗರು ಭಾರತೀಯ ಸಂಸ್ಕೃತಿಯತ್ತ ಒಲವು ತೋರುತ್ತಿರುವ ಈ ಸಂದರ್ಭದಲ್ಲಿ ನಮ್ಮ ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಗೆ ಆಕರ್ಷಿತರಾಗಲು ನಮ್ಮ ನಾಯಕರ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದೆ.
ಶಾಲಾ ಕಾಲೇಜುಗಳ ಪಠ್ಯದಲ್ಲಿ ದೇಶಿಯ ಕಲೆ, ಸಾಹಿತ್ಯ, ಸಂಸ್ಕೃತಿ, ನೃತ್ಯ, ಕ್ರೀಡೆಯನ್ನು ಅಳವಡಿಸಿದಾಗ ಭವಿಷ್ಯದ ಪೀಳಿಗೆಗೆ ಭಾರತೀಯ ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯ ಎಂದರು.
ಕೇರಳ, ತಮಿಳುನಾಡು, ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾವಿದರು ನೃತ್ಯೋತ್ಸವದಲ್ಲಿ ಭಾಗವಹಿಸಿ ಉತ್ತಮ ರಂಜನೆ ನೀಡಿದರು.