ಸುದ್ದಿಮೂಲ ವಾರ್ತೆ
ರಾಮನಗರ,ಜೂ.26 : ಜಿಲ್ಲೆಯಲ್ಲಿ 2 ಸಾವಿರ ಮನೆಗಳು ಮಾತ್ರ ವಿದ್ಯುತ್ ಬಿಲ್ ಪಾವತಿ ವ್ಯಾಪ್ತಿಗೆ ಬರುತ್ತವೆ, ಉಳಿದವರಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ದೊರಕಬೇಕು. ಅಧಿಕಾರಿಗಳು ಸೌಲಭ್ಯ ತಲುಪಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯ್ತಿ ಭವನದಲ್ಲಿ ಸೋಮವಾರ ನಡೆದ 2022-23 ಮತ್ತು 23-24ನೇ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರದಲ್ಲಿ ವಿದ್ಯುತ್ ಬಿಲ್ ಏರಿಕೆ ಆಗಿದೆ. ಅವರು ತಿಂದು ನಮ್ಮ ಮೂತಿಗೆ ಒರೆಸುತ್ತಿದ್ದಾರೆ ಎಂದು ದೂರಿದರು.
ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಭ್ರಷ್ಟಾಚಾರ ರಹಿತ ಅನುಷ್ಠಾನಕ್ಕೆ ಆದ್ಯತೆ ಕೊಡಬೇಕು. ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಜಿರೋ ಟಿಕೇಟ್ ಲೆಕ್ಕ ಇಡಿ. ಗೃಹ ಜ್ಯೋತಿ ನೋಂದಣಿಯಲ್ಲಿ ತಪ್ಪಾಗದಂತೆ ನೋಡಿಕೊಳ್ಳುವಂತೆ ಆದೇಶಿಸಿದರು.
ಗೃಹಲಕ್ಷ್ಮಿ ಆಪ್ ಸಿದ್ಧ ಮಾಡಿದ್ದೇವೆ. ಯೋಜನೆ ಜಾರಿ ದಿನಾಂಕ ನಾಳೆ ನಿರ್ಧಾರ ಆಗಲಿದೆ. ಎಲ್ಲವೂ ಉಚಿತ. ಗ್ರಾಮ್ ಒನ್ ನಲ್ಲಿ ಯಾರಾದರೂ ಲಂಚ ಕೇಳಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸೂಚಿಸಿದರು.
ಕೇಂದ್ರ ಪಠ್ಯಕ್ರಮದ ಶಾಲೆ
ಮಕ್ಕಳಿಗೆ ಶಿಕ್ಷಣ ಕೊಡಿಸುವ ಉದ್ದೇಶದಲ್ಲಿ ಗ್ರಾಮಾಂತರ ಪ್ರದೇಶಗಳ ಜನ ನಗರಗಳಿಗೆ ವಲಸೆ ಬರುವುದನ್ನು ತಪ್ಪಿಸಬೇಕು. ಹೀಗಾಗಿ ಎರಡು-ಮೂರು ಪಂಚಾಯ್ತಿಗೆ ಒಂದು ನವೋದಯ, ಸಿಬಿಎಸ್ಸಿ ಶಾಲೆಗಳ ಮಾದರಿಯಲ್ಲಿ ಶಾಲೆಗಳನ್ನು ಆರಂಭಿಸಿ. ಇದು ಇಡೀ ರಾಜ್ಯಕ್ಕೆ ಈ ಯೋಜನೆ ಅನ್ವಯವಾಗಲಿದೆ. ಪರಿಸರ ಯೋಜನೆಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಿ. ಶಾಲೆಗಳ ಜತೆ ಒಪ್ಪಂದ ಮಾಡಿಕೊಳ್ಳಿ. ಸುಳ್ಳು ಲೆಕ್ಕದಲ್ಲಿ ಗಿಡ ನೆಡಬೇಡಿ ಎಂದರು.
ಲಂಚ ನೀವು ತಿನ್ನಬೇಡಿ, ತಿನ್ನಿಸಬೇಡ
ನೀವು ಯಾರಿಗೂ ಲಂಚ ಕೊಡಬೇಡಿ. ನೀವು ಲಂಚ ತಗೋ ಬೇಡಿ. ನಾನು ಯಾರನ್ನು ವರ್ಗಾವಣೆ ಮಾಡಿಸುವುದಿಲ್ಲ ಎಂದು ಡಿಸಿಎಂ ತಿಳಿಸಿದರು.
ಸರ್ಕಾರದ ಯಾವುದೇ ಕಾಮಗಾರಿ ಪ್ರಾರಂಭಕ್ಕೂ ಮೊದಲು ಹಾಗೂ ಮುಗಿದ ನಂತರ ವಿಡಿಯೋ, ಪೋಟೋ ತೆಗೆಯಬೇಕು. ಕಾಮಗಾರಿಯ ಪ್ರಗತಿ ಪ್ರತಿ ಹಂತದ ವಿಡಿಯೋ, ಫೋಟೋ ಇರಬೇಕು. ಕಳ್ಳಬಿಲ್ಲು, ಡಬಲ್ ಎಂಟ್ರಿಗೆ ಆಸ್ಪದ ಇಲ್ಲದಂತೆ ಎಚ್ಚರ ವಹಿಸಿ. ಎರಡು ಇಲಾಖೆ, ಎರಡು ಬಿಲ್ ಸೃಷ್ಟಿ ಮಾಡಿದರೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಗಾಂಜಾ, ರೇವಾ ಪಾರ್ಟಿ ಯಾವುದಕ್ಕೂ ಜಿಲ್ಲೆಯಲ್ಲಿ ಅವಕಾಶವಿಲ್ಲ. ಕಾನೂನು ಸುವ್ಯವಸ್ಥೆ ಕಡೆ ಪೊಲೀಸರು ಗಮನಹರಿಸಬೇಕು ಎಂದು ಸಲಹೆ ನೀಡಿದರು. ರಸ್ತೆಗಳಲ್ಲಿ ಬೆಳೆಗಳ ಕಣ ಮಾಡಲು ಅವಕಾಶ ಕೊಡಬೇಡಿ. ಟ್ರಾಕ್ಟರ್ಗಳಿಗೆ ಡ್ರೈವಿಂಗ್ ಲೈಸೆನ್ಸ್, ಇನ್ಸೂರೆನ್ಸ್ ಕಡ್ಡಾಯ ಇರಬೇಕು. ಇದಕ್ಕೆ 100 ದಿನಗಳ ಗಡುವು. ಹೋಬಳಿವಾರು ಅಭಿಯಾನ ಮಾಡಿ. ಈ ಬಗ್ಗೆ ಕರಪತ್ರ ಹಂಚಿ ಪ್ರಚಾರ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ಡಿ.ಕೆ.ಸುರೇಶ್, ಎಂ.ಎಲ್.ಸಿ ಎಸ್.ರವಿ, ಅ.ದೇವೇಗೌಡ, ಶಾಸಕರುಗಳಾದ ಇಕ್ಬಾಲ್ ಹುಸೇನ್, ಎಚ್.ಸಿ.ಬಾಲಕೃಷ್ಣ, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಪಂ ಸಿಇಒ ದಿಗ್ವಿಜಯ್ಬೋಡ್ಕೆ, ಎಸ್ಪಿ ಕಾರ್ತಿಕ್ ರೆಡ್ಡಿ ಉಪಸ್ಥಿತರಿದ್ದರು.