ಸುದ್ದಿಮೂಲ ವಾರ್ತೆ
ಮೈಸೂರು, ಜೂ. 27 : ರಾಜ್ಯದಲ್ಲಿ ಆರೋಗ್ಯ ಇಲಾಖೆಯ ಸರ್ಕಾರಿ ವೈದ್ಯರು ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುವುದಕ್ಕೆ ಮತ್ತು ಖಾಸಗಿ ಕ್ಲಿನಿಕ್ ಗಳನ್ನು ನಡೆಸುವುದಕ್ಕೆ ನಿರ್ಬಂಧ ಹೇರಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಮತ್ರು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹಿಂದಿನ ದಿನಗಳಲ್ಲಿ ವೈದ್ಯರ ಕೊರತೆ ಇದ್ದ ಕಾರಣ ಎರಡು ಕಡೆಗಳಲ್ಲಿ ಕೆಲಸ ಮಾಡಲು ಅವಕಾಶ ಕೊಡಲಾಗಿತ್ತು. ಈಗ ಅಂತಹ ಸಮಸ್ಯೆಗಳಿಲ್ಲ. ಹೀಗಾಗಿ, ಸರ್ಕಾರದ ವ್ಯಾಪ್ತಿಯಲ್ಲಿ ಮಾತ್ರ ಕೆಲಸ ಮಾಡಲು ಆದೇಶಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಹೇಳಿದರು.
ಸರ್ಕಾರಿ ವೈದ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಸೇವೆ ಮಾಡಬೇಕು. ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವವರು ಮಾತ್ರ ಕ್ಲಿನಿಕ್ ನಡೆಸಲು ಅವಕಾಶ ಇದೆ ಎಂದರು.
ಚಾಮರಾಜನಗರ ದುರಂತ- ಮರು ತನಿಖೆ
ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ತನಿಖೆಗೆ ಒಪ್ಪಿಗೆ ಕೊಡಿ ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಯಾವ ಅಂಶಗಳ ಆಧಾರದ ಮೇಲೆ ಮರು ತನಿಖೆಯಾಗಬೇಕು ಎಂದು ಸರ್ಕಾರದಿಂದ ಮತ್ತೆ ಪತ್ರ ಬಂದಿದೆ. ಹಾಗಾಗಿ ತನಿಖೆ ಆಗಬೇಕಿರುವ ಆರೋಪ ಪಟ್ಟಿ ಸಿದ್ಧ ಮಾಡಲಾಗುತ್ತಿದೆ. ಅದರ ಪ್ರತಿಯನ್ನುಶೀಘ್ರದಲ್ಲೇ ಸರ್ಕಾರಕ್ಕೆ ಕಳುಹಿಸಿ, ಸರ್ಕಾರ ನಂತರ ತೀರ್ಮಾನ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ನಿಂದ ಬಂದವರಿಂದ ಬಿಜೆಪಿ ಶಿಸ್ತು ಕೆಟ್ಟಿತು ಎಂಬ ಕೆ.ಎಸ್ ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ದ ಸಚಿವರು, ಕಾಂಗ್ರೆಸ್ ನಿಂದ ಬಂದ ಶಾಸಕರಿಂದ ಸರ್ಕಾರ ಮಾಡಿ ಶೇ. 40 ರಿಂದ 50 ರಷ್ಟು ಕಮಿಷನ್ ಪಡೆದು ಈಗ ಈ ರೀತಿ ಹೇಳಿದರೆ ಯಾರು ನಂಬುತ್ತಾರೆ ಎಂದು ತಿರುಗೇಟು ನೀಡಿದರು.
ಸ್ವಾಗತಿಸಿದ ಸಿಂಹ
ಸಚಿವರಾದ ನಂತರ ಪ್ರಥಮ ಬಾರಿಗೆ ಮೈಸೂರಿಗೆ ಬಂದ ದಿನೇಶ್ ಗುಂಡೂರಾವ್ ಅವರನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸರ್ಕಾರಿ ಅತಿಥಿಗೃಹದ ಬಳಿ ಹೂಗುಚ್ಛ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು.