ಸುದ್ದಿಮೂಲ ವಾರ್ತೆ
ಮೈಸೂರು, ಜೂ.27:ಜಿಲ್ಲಾದ್ಯಂತ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು. ತಾಲೂಕು ಕೇಂದ್ರಗಳಲ್ಲಿಯೂ ವಿಜೃಂಭಣೆಯಿಂದ ನಡೆಯಿತು. ಬೆಂಗಳೂರು ಸೃಷ್ಟಿಕರ್ತ ಕೆಂಪೇಗೌಡರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತಿತರ ಒಕ್ಕಲಿಗರ ಸಂಘಟನೆಗಳ ಆಶ್ರಯದಲ್ಲಿ ಅರಮನೆ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಅದ್ಧೂರಿ ಮೆರವಣಿಗೆ ಚಾಲನೆ ನೀಡಲಾಯಿತು.
ಇಲ್ಲಿಂದ ಆರಂಭವಾದ ಕಲಾಮಂದಿರ ಬಳಿ ಮುಕ್ತಾಯವಾಯಿತು. ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್.ಸಿ. ಮಹದೇವಪ್ಪ, ಸಂಸದ ಪ್ರತಾಪಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಜಿ.ಡಿ. ಹರೀಶ್ ಗೌಡ, ಮರಿತಿಬ್ಬೆಗೌಡ, ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ರಾಜ್ಯ ಒಕ್ಕಲಿಗರ ಸಂಘದ ಸಹ ಕಾರ್ಯದರ್ಶಿ ಗಂಗಾಧರ್, ನಿರ್ದೇಶಕರಾದ ಶ್ರೀಧರ್, ದಾಸರಕೊಪ್ಪಲು ಜಯರಾಂ, ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ಉಮಾಶಂಕರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ನಾಡಪ್ರಭು ಕೆಂಪೇಗೌಡರ ಮೂರ್ತಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಕಲಾ ತಂಡಗಳು ಜಾನಪದ ಕಲೆ ಪ್ರದರ್ಶಿಸಿದವು. ಡಿಜೆ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದ್ದರು. ಸಂಸದ ಪ್ರತಾಪಸಿಂಹ ಅವರನ್ನು ಸಚಿವ ಡಾ ಎಚ್.ಸಿ. ಮಹದೇವಪ್ಪ ತಬ್ಬಿಕೊಂಡ ಘಟನೆಯೂ ನಡೆಯಿತು.
ನಾನಾ ಕಡೆ ಆಚರಣೆ
ಕೆ.ಆರ್.ನಗರ, ಪಿರಿಯಾಪಟ್ಟಣ, ಹುಣಸೂರು, ಹೆಚ್.ಡಿ.ಕೋಟೆ, ತಾಲೂಕು ಮತ್ತು ಮೈಸೂರು ನಗರದ ಹಲವೆಡೆ ಕೆಂಪೇಗೌಡ ಜಯಂತಿಯನ್ನು ಆಚರಿಸಲಾಯಿತು. ಮೈಸೂರು ಕೋ. ಆಪರೇಟಿವ್ ಬ್ಯಾಂಕ್ ನಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.