ಸುದ್ದಿಮೂಲವಾರ್ತೆ
ಕೊಪ್ಪಳ,ಜೂ.29:ರಾಜ್ಯ ಸರಕಾರವು ಮಹಿಳೆಯರು ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆ ಜಾರಿಯಾದ ಹಿನ್ನಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರ ಭೇಟಿ ನೀಡುವುದು ಕಂಡು ಬರುತ್ತಿದೆ. ಭಕ್ತರು ಈಗ ದೇವಸ್ಥಾನಗಳಲ್ಲಿ ತಮ್ಮ ಭಕ್ತಿ ಕಾಣಿಕೆಯನ್ನು ಸಮರ್ಪಿಸುತ್ತಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಗೆ ಹತ್ತಿರ ಹತ್ತಿರ ಕೋಟಿ ರೂಪಾಯಿ ಸಂಗ್ರಹವಾಗಿದೆ.
ಆದಿ ಪರಾಶಕ್ತಿ ಎಂದು ಖ್ಯಾತಿ ಹೊಂದಿರುವ ಶಕ್ತಿ ದೇವತೆ ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ದರ್ಶನಕ್ಕೆ ಶಕ್ತಿ ಯೋಜನೆ ಬಲ ನೀಡಿದೆ. ಜೂ 11 ರಂದು ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಹಿನ್ನೆಲೆಯಲ್ಲಿ ಈಗ ದೇವಸ್ಥಾನಗಳಿಗೆ ಮಹಿಳೆಯರ ದಂಡೆ ಹರಿದು ಬರುತ್ತಿದೆ. ಸಾಮಾನ್ಯವಾಗಿ ಮಂಗಳವಾರ, ಶುಕ್ರವಾರ ಹಾಗು ಹುಣ್ಣಿಮೆ ದಿನ ಲಕ್ಷಾಂತರ ಜನ ಭಕ್ತರು ಹುಲಿಗೆಮ್ಮನ ದರ್ಶನಕ್ಕೆ ಬರುತ್ತಿದ್ದರು. ಆದರೆ ಈಗ ಶಕ್ತಿ ಯೋಜನೆ ಜಾರಿಯಾದ ನಂತರ ನಿತ್ಯವೂ ಜನ ಹುಲಿಗಿಗೆ ಬರುತ್ತಿದ್ದಾರೆ. ಇದರಿಂದಾಗಿ ಹುಲಿಗೆಮ್ಮ ದೇವಸ್ಥಾನವು ಫುಲ್ ರಷ್ ಇದೆ. ದೇವಸ್ಥಾನಕ್ಕೆ ಬರುವ ಭಕ್ತರು ದೇವಿಗೆ ತಮ್ಮ ಹರಿಕೆಯನ್ನು ಸಲ್ಲಿಸುತ್ತಿದ್ದಾರೆ.
ಬುಧುವಾರ ಹುಲಿಗೆಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಒಟ್ಟು ₹99.70 ಲಕ್ಷ ರೂಪಾಯಿ ನಗದು. 225 ಗ್ರಾಂ ಬಂಗಾರ, 14 ಕೆಜಿ ಬೆಳ್ಳಿ ಸಂಗ್ರಹವಾಗಿದೆ.ಕಳೆದ ತಿಂಗಳು ಹುಲಿಗೆಮ್ಮ ದೇವಸ್ಥಾನದ ಹುಂಡಿಯಲ್ಲಿ 1.02 ಕೋಟಿ ರೂಪಾಯಿ ನಗದು, 350 ಗ್ರಾಂ ಬಂಗಾರ ಹಾಗು 15 ಕೆಜಿ ಬೆಳ್ಳಿ ಸಂಗ್ರಹವಾಗಿತ್ತು. ಇಲ್ಲಿ ಗಮನಿಸಬೇಕಾಗಿದ್ದು ಕಳೆದ ತಿಂಗಳು ದೇವಿಯ ಜಾತ್ರೆ ಇತ್ತು. ಜಾತ್ರೆಯ ಸಂದರ್ಭದಲ್ಲಿ ಸಹಜವಾಗಿ ಬಹಳಷ್ಟು ಜನ ಬರುತ್ತಾರೆ. ಜಾತ್ರೆಯ ನಂತರವೂ ನಿತ್ಯ ಅಪಾರ ಪ್ರಮಾಣದ ಭಕ್ತರು ಬರುತ್ತಿರುವುದು ಈ ತಿಂಗಳು ಎಂದು ಇಲ್ಲಿಯ ಅಧಿಕಾರಿಗಳು ಹೇಳುತ್ತಿದ್ದಾರೆ.
ಈ ಹಿಂದೆ ಬಸ್ ಚಾರ್ಜ್ ಕೊಟ್ಟು ಬರುತ್ತಿದ್ದ ಭಕ್ತರು ಈಗ ಬಸ್ ಟಿಕೆಟ್ ಕೊಡುತ್ತಿಲ್ಲ. ಬಸ್ ಗಾಗಿ ನೀಡುತ್ತಿದ್ದ ಹಣವನ್ನು ದೇವಿಗೆ ಸಮರ್ಪಿಸುತ್ತಿದ್ದಾರೆ ಎನ್ನಲಾಗಿದೆ. ಒಂದು ಕಡೆ ಸರಕಾರವು ಉಚಿತ ಯೋಜನೆ ನೀಡುತ್ತಿದ್ದರೆ, ಸರಕಾರದ ಸ್ವಾಮ್ಯದಲ್ಲಿರುವ ದೇವಸ್ಥಾನಗಳಿಗೆ ಭಕ್ತರು ಮತ್ತೆ ದೇಣಿಗೆ ನೀಡುತ್ತಿದ್ದಾರೆ.