ಬಳ್ಳಾರಿ, ಜೂ. 29:ಕರ್ನಾಟಕ ಸರ್ಕಾರದ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗೆ ಹೆಸರು ನೋಂದಣಿಗಾಗಿ ಪ್ರತಿಯೊಬ್ಬರಿಂದ 150 ರಿಂದ 200 ರೂಪಾಯಿ ಶುಲ್ಕವನ್ನು ಸಂಗ್ರಹ ಮಾಡುತ್ತಿದ್ದ ಬೆಂಗಳೂರು ಮೂಲಕ `ದಿಶಾ ಒನ್’ ಏಜೆನ್ಸಿಯ ನಬೀರ್ ಹುಸೇನ್ನನ್ನು ಮಹಿಳೆಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ನಡೆದಿದೆ.
ಕರ್ನಾಟಕದ ಸರ್ಕಾರ ಉಚಿತ ಗ್ಯಾರೆಂಟಿ ಸ್ಕೀಂಗಳನ್ನು ನೀಡುತ್ತಿದ್ದರೂ `ದಿಶಾ ಒನ್’ ಹೆಸರಿನ ಏಜೆನ್ಸಿಯು ಮಹಿಳೆಯರ ನೋಂದಣಿಗಾಗಿ ಅರ್ಜಿಗಳನ್ನು ಭರ್ತಿ ಮಾಡಲು ಪ್ರತಿಯೊಬ್ಬ ಮಹಿಳೆಯಿಂದ 150 ರಿಂದ 200 ರೂಪಾಯಿಗಳನ್ನು ಹವಂಭಾವಿ ಪ್ರದೇಶದಲ್ಲಿ ಮನೆ ಮನೆಗೆ ಭೇಟಿ ಮಾಡಿ, ಸಂಗ್ರಹ ಮಾಡುತ್ತಿದ್ದಾಗ ಅನುಮಾನಗೊಂಡ ಮಹಿಳೆಯರು ನಬೀರ್ ಹುಸೇನನ್ನು ವಶಕ್ಕೆ ಪಡೆದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯ ಕುರಿತು ತನಿಖೆ ನಡೆಸಿದ್ದಾರೆ.
`ದಿಶಾ ಒನ್’ ಖಾಸಗಿ ಏಜೆನ್ಸಿ. ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೇರಿದಂತೆ ಇತರ ಗ್ಯಾರಂಟಿ ಯೋಜನೆಗಳ ಅರ್ಜಿ ಭರ್ತಿ ಮಾಡಿ ಸರ್ಕಾರಿ ಸೌಲಭ್ಯದ ಫಲಾನುಭವಿ ಮಾಡುವುದಾಗಿ ಹೇಳಿಕೊಂಡು ಅನೇಕರನ್ನು ಒಪ್ಪಿಸಿ, ಅವರಿಂದ ಹಣವನ್ನೂ ಪಡೆದಿದ್ದಾನೆ. ಆದರ, ಪೊಲೀಸರ ವಿಚಾರಣೆಯಲ್ಲಿರುವ ಆರೋಪಿಯು, `ಸೈಬರ್ ಸೆಂಟರ್ಗಳಿಗೆ ಹೋಗಲಾಗದೇ, ಅರ್ಜಿ ಸಲ್ಲಿಸಲಾಗದೇ ಇರುವ ಮಹಿಳೆಯರಿಗೆ ಅರ್ಜಿ ಭರ್ತಿ ಮಾಡುವ ಕೆಲಸ ಮಾಡಿಕೊಡುತ್ತಿದ್ದೇನೆ. ಅದಕ್ಕಾಗಿ ಶುಲ್ಕ ಪಡೆಯುತ್ತಿರುವೆ. ಇದರಲ್ಲಿ ವಂಚನೆ, ಕಳ್ಳತನ ಏನೂ ಇಲ್ಲ’ ಎಂದು ಸಮರ್ಥನೆ ನೀಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.