ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ. 29: ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಕೆ.ಆರ್. ಪುರಂ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಅಜಿತ್ ಕುಮಾರ್ ರೈ ಮನೆ ಸೇರಿ ಅವರಿಗೆ ಸಂಬಂಧಿಸಿದ 11 ಸ್ಥಳಗಳಲ್ಲಿ ಏಕಕಾಲಕ್ಕೆ ಬುಧವಾರ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು 40 ಲಕ್ಷ ರೂ. ನಗದು ಸಹಿತ 1.90 ಕೋಟಿ ಮೌಲ್ಯದ ಹಣ ಪತ್ತೆಯಾಗಿತ್ತು. ವಿವಿಧೆಡೆ 100ಕ್ಕೂ ಅಧಿಕ ಎಕರೆಯಷ್ಟು ಬೇನಾಮಿ ಹೆಸರುಗಳಲ್ಲಿರುವ ಕೃಷಿ ಭೂಮಿಗೆ ಸಂಬಂಧಿಸಿದ ಆಸ್ತಿ ಪತ್ರಗಳು ಸಿಕ್ಕಿದ್ದವು. ಜೊತೆಗೆ 4 ಫಾರ್ಚೂನರ್, 4 ಥಾರ್, 1 ಲ್ಯಾಂಡ್ ಕ್ರೂಸರ್ ಹಾಗೂ ಬಹು ದುಬಾರಿಯ ವಿದೇಶಿ ಮದ್ಯ ಬಾಟಲಿಗಳನ್ನು ವಶಕ್ಕೆ ಪಡೆದಿದ್ದರು. ಈ ಸಂಬಂಧ ಹೆಚ್ಚಿನ ವಿಚಾರಣೆ ಅಗತ್ಯ ಇದ್ದರಿಂದ ಅವರನ್ನು ಬಂಧನ ಮಾಡಲಾಗಿದೆ.
ಅಜಿತ್ಕುಮಾರ್ ರೈ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಭೂಮಾಪಕರಾಗಿದ್ದ ಅವರ ತಂದೆಯ ನಿಧನದ ನಂತರ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಪಡೆದಿದ್ದರು. ಕಂದಾಯ ಇಲಾಖೆ ಸೇರಿದ ಅವರು ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಬಡ್ತಿ ಪಡೆದು ತಹಶೀಲ್ದಾರ್ ಆಗಿದ್ದರು.
ಅಜಿತ್ ಕುಮಾರ್ ತನ್ನ ಆಪ್ತ ಸ್ನೇಹಿತ ಗೌರವ್ ಶೆಟ್ಟಿ ಹೆಸರಿನಲ್ಲಿ ಸುಮಾರು 98 ಎಕರೆ ಜಮೀನು ಮತ್ತು ಸಹೋದರ ಅಶಿತ್ ರೈ ಹೆಸರಿನಲ್ಲಿ 40 ಎಕರೆ ಜಮೀನು ಬೇನಾಮಿ ಹೆಸರುಗಳಲ್ಲಿ ಮಾಡಿದ್ದಾರೆ. ಇವುಗಳ ಮಾರುಕಟ್ಟೆ ಮೌಲ್ಯ 500 ಕೋಟಿ ರೂ.ಗೂ ಅಧಿಕ ಎಂದು ಅಂದಾಜಿಸಲಾಗುತ್ತಿದೆ.
ದೇವನಹಳ್ಳಿ, ದೊಡ್ಡಬಳ್ಳಾಪುರ, ಕೆ.ಆರ್. ಪುರಂ ಸುತ್ತಮುತ್ತ ಬೇನಾಮಿ ಜಮೀನುಗಳು, ಫಾರಂಹೌಸ್ ಹೊಂದಿದ್ದಾರೆ. ಪುತ್ತೂರು, ಬೆಂಗಳೂರಿನ ಬಸವೇಶ್ವರನಗರ, ಸಹಕಾರಿನಗರ, ದೇವನಹಳ್ಳಿಯಲ್ಲಿ ಐಷಾರಾಮಿ ಮನೆಗಳು, ಫ್ಲಾಟ್ಗಳನ್ನು ಹೊಂದಿರುವುದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ಹೊರಬಂದಿದೆ.
ಗೌರವ್ಶೆಟ್ಟಿ, ನವೀನ್ ಕುಮಾರ್, ಕೃಷ್ಣಪ್ಪ, ಹರ್ಷವರ್ಧನ್ ಎಂಬುವವರ ಹೆಸರಿನಲ್ಲಿ ತಹಶೀಲ್ದಾರ್ ಅಜಿತ್ಕುಮಾರ್ ರೈ ಬೇನಾಮಿ ಆಸ್ತಿಗಳನ್ನು ಮಾಡುತ್ತಿದ್ದರು. ಇವರನ್ನೂ ಸಹ ವಿಚಾರಣೆಗೆ ಕರೆಯಲಾಗುವುದು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.