ಸುದ್ದಿಮೂಲ ವಾರ್ತೆ
ಬೆಂಗಳೂರು ಜೂ.30 : ಬದಲಾದ ಸಂದರ್ಭ ಹಾಗೂ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿಕೊಂಡು ತಾಂತ್ರಿಕ ಕ್ಷೇತ್ರದ ಪಥದಲ್ಲಿ ಮುಂದೆ ಸಾಗಿ ಪ್ರಗತಿ ಸಾಧಿಸಬೇಕು ಎಂದು ರಕ್ಷಣಾ ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ, ಡಾ.ಎಸ್.ಕ್ರಿಸ್ಟಫರ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ರಾಜ್ಯ ಒಕ್ಕಲಿಗರ ಸಂಘದ ಬೆಂಗಳೂರು ತಾಂತ್ರಿಕ ಮಹಾ ವಿದ್ಯಾಲಯದ ಸಹಯೋಗದೊಂದಿಗೆ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಹ್ಯಾಕ್ಫೆಸ್ಟ್-23 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಕ್ಷಣಾ ಇಲಾಖೆಗೆ ಸಂಬಂಧಿಸಿದ ಯುದ್ಧ ವಿಮಾನಗಳಿಗೆ ಅಂದಿನ ಸೀಮಿತ ತಂತ್ರಜ್ಞಾನವನ್ನು ಬಳಸಿಕೊಂಡು ರಾಡಾರ್ಗಳನ್ನು ಅಳವಡಿಸಲು ತಾವು ಪಟ್ಟ ಶ್ರಮ ಕುರಿತು ವಿವರಿಸಿದರು. ಒಂದು ವಿಮಾನಕ್ಕೆ ರಾಡಾರ್ ಅಳವಡಿಸಿ, ಅದರಲ್ಲಿರುವ ನೂನ್ಯತೆಗಳನ್ನು ಕಂಡು ಹಿಡಿದು, ಅವುಗಳನ್ನು ಸರಿಪಡಿಸಿ ಮುಂದೆ ಹಲವಾರು ವಿಮಾನಗಳಿಗೆ ದೋಷರಹಿತ ರಾಡಾರ್ಗಳನ್ನು ಅಳವಡಿಸಿದ್ದನ್ನು ನೆನಪಿಸಿಕೊಂಡರು.
ರಕ್ಷಣಾ ಇಲಾಖೆಯ ಮುಖ್ಯಸ್ಥರಾಗಿದ್ದ ಡಾ.ಅಬ್ದುಲ್ಕಲಾಂ ಅವರ ಕೌಶಲ್ಯವನ್ನು ಪ್ರಶಂಸಿಸಿದ ಅವರು, ರಕ್ಷಣಾ ಇಲಾಖೆಯ ಸಂಶೋಧನೆಗೆ ಅವರ ಸೇವೆ ಅಪಾರ ಎಂದರು.
ಬದಲಾವಣೆ ಜಗದ ನಿಯಮ. ಇಂದು ಇರುವ ತಂತ್ರಜ್ಞಾನ ನಾಳೆ ಇರುವುದಿಲ್ಲ. ನಾಳೆಯ ಅಗತ್ಯಕ್ಕೆ ತಕ್ಕಂತ ತಮ್ಮ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಕೊಳ್ಳುವುದೊಂದೇ ತಮ್ಮ ಮುಂದಿರುವ ದಾರಿ ಎಂದು ಹೇಳಿದರು.
ಆ್ಯಕ್ಟಿವ್ ಆಂಟೆನಾ ಏರೋ ಯೂನಿಟ್ (ಎಎಎಯು) ಕುರಿತ ಹಲವಾರು ತಾಂತ್ರಿಕ ಅಂಶಗಳನ್ನು ವಿವರಿಸಿದರು. ಇಂಟಿಗ್ರೇಟೆಡ್ ಫ್ಲೈಟ್ ಕ್ಯಾಂಪೇನ್ ಫಾರ್ ದಿ ಎಇಡಬ್ಲ್ಯು ಅಂಡ್ ಎಸ್ಸಿ ತಂತ್ರಜ್ಞಾನದಲ್ಲಿ ಭಾರತ ಅಪಾರ ಪ್ರಗತಿ ಸಾಧಿಸಿದ್ದು, ಆ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಸಾಧಿಸಿ ಚಿಲಿ, ನಾರ್ವೇ ಮುಂದಾದ ರಾಷ್ಟ್ರಗಳ ಪಟ್ಟಿಗೆ ನಮ್ಮ ದೇಶ ಸೇರ್ಪಡೆಯಾಗಿದೆ ಎಂದರು.
ಬಿಐಟಿ ಪ್ರಾಂಶುಪಾಲರಾದ ಡಾ.ಅಶ್ವತ್ಥ್ ಎಂ.ಯು.ಮಾತನಾಡಿ, ಇಂದು ಅಧ್ಯಯನ ಮಾಡಿದ ಇಂಜಿಯರಿಂಗ್ ವಿಷಯ ನಾಳೆಗೆ ಹಳೆಯದಾಗಬಹುದು, ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಜ್ಞಾನಾರ್ಜನೆಯ ಜೊತೆಗೆ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಬಿಐಟಿ ಉಪ ಪ್ರಾಂಶಪಾಲರಾದ ಡಾ.ಜೆ.ಪ್ರಕಾಶ್, ಬಿಐಟಿ ಸಂಚಾಲಕಿ ಸಿಒಇ ಡಾ.ಕಲ್ಪನಾ ಎ.ಬಿ.ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.