ಸುದ್ದಿಮೂಲ ವಾರ್ತೆ
ರಾಮನಗರ, ಜೂ 30 : ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳ ಬಗ್ಗೆ ರಾಜ್ಯ ಸರ್ಕಾರ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ರಾಜ್ಯದ ರೈತರಿಗೆ ತಿಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಗಬ್ಬಾಡಿ ಲಕ್ಷ್ಮಿನಾರಾಯಣ ಗೌಡ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಈ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತರಲಾಗಿತ್ತು. ರೈತ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಕಾಂಗ್ರೆಸ್ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಈ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿತ್ತು. ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ ವಿರೋಧಕ್ಕೆ ಕಾರಣವಾಗಿದ್ದ ಈ ಕಾಯ್ದೆಗಳ ಜಾರಿಯಿಂದ ಜನರಿಗೆ ಆಗುವ ಅನಾನುಕೂಲಗಳೇನು, ಅನುಕೂಲಗಳೇನು ಎಂಬುದನ್ನು ರೈತ ಸಮುದಾಯದ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಎಪಿಎಂಸಿಗಳ ಆಚೆಗೂ ಮಾರುಕಟ್ಟೆಕ್ಕೆ ತಿದ್ದಪಡಿ ಕಾಯ್ದೆಯಲ್ಲಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ತಿದ್ದುಪಡಿಯನ್ನು ವಾಪಸ್ಸು ಪಡೆಯುವ ಮುನ್ನ ಮಾರುಕಟ್ಟೆ ಬೆಲೆಯನ್ನು ಎಪಿಎಂಸಿಯಲ್ಲಿ ಒದಗಿಸುವ ಬಗ್ಗೆ ಸರ್ಕಾರ ತನ್ನ ನಿಲುವು ವ್ಯಕ್ತಪಡಿಸಬೇಕು ಎಂದರು.
ಇತ್ತೀಚೆಗೆ ಜಾನುವಾರುಗಳಿಗೆ ಕಾಲುಬಾಯಿ ಜ್ವರ, ಚಪ್ಪೆ ರೋಗ, ಗಂಟು ರೋಗ ಹೆಚ್ಚಾಗಿ ಬರುತ್ತಿವೆ. ನೂರಾರು ಜಾನುವಾರುಗಳು ಮೃತಪಟ್ಟಿವೆ. ವಿಮೆ ಇದ್ದರೂ, ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅದು ರೈತರಿಗೆ ಸಿಗುತ್ತಿಲ್ಲ. ನಷ್ಟದಲ್ಲಿರುವ ಹೈನೋದ್ಯಮ ಪ್ರೋತ್ಸಾಹಿಸಲು ಸರ್ಕಾರ ಲೀಟರ್ಗೆ ಕನಿಷ್ಠ 10 ರೂ. ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿದರು.
ವನ್ಯ ಜೀವಿಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.