ಸುದ್ದಿಮೂಲ ವಾರ್ತೆ
ತಿಪಟೂರು, ಜು.2: ಸಂವಿಧಾನದ ಮೂರು ಅಂಗಗಳು ಕೆಟ್ಟಿದ್ದು, ನಾಲ್ಕನೇ ಅಂಗವಾದ ಪತ್ರಿಕಾ ರಂಗವು ಕೆಡದಂತೆ ನೋಡಿಕೋಳ್ಳುವ ಜವಾಬ್ದಾರಿ ಇಂದಿನ ಪತ್ರಕರ್ತರ ಹಾಗೂ ಸಂಪಾದಕರ ಮೇಲಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ಆಯೋಜಿಸಿದ್ದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆಯ ಕರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರು ಯಾರ ಪರವು ವಿರೋಧವು ಇಲ್ಲದೆ ಧೈರ್ಯವಾಗಿ ಯಾರೇ ತಪ್ಪು ಮಾಡಿದರೂ ಬರವಣಿಗೆಯಲ್ಲಿ ಎಚ್ಚರಿಸಬೇಕು ಸಂವಿಧಾನದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳನ್ನು ಪ್ರಶ್ನಿಸುವ ಅಧಿಕಾರ ಪತ್ರಿಕಾ ಸ್ವಾತಂತ್ರ್ಯಕ್ಕೆ ಇದೆ. ಈಗಾಗಲೇ ಸಂವಿಧಾನದ ಮೂರು ಅಂಗಗಳು ಕೆಟ್ಟಿದ್ದು ನಾಲ್ಕನೇ ಅಂಗ
ಪತ್ರಿಕಾರಂಗವು ಕೆಡದಂತೆ ನೋಡಿಕೊಂಡು ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದರು.
ಪತ್ರಿಕಾ ರಂಗಕ್ಕೆ ಮಹಿಳಾ ಪತ್ರಕರ್ತರ ತುಂಬಾ ಅವಶ್ಯಕತೆ ಇದೆ. ಹೆಚ್ಚು ಮಹಿಳೆಯರು ಈ ರಂಗಕ್ಕೆ ಪ್ರವೇಶವಾಗಬೇಕಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಪತ್ರಕರ್ತರನ್ನು ಒಗ್ಗೂಡಿಸಿ ಚರ್ಚಿಸಿ ಪತ್ರಿಕಾ ಭವನ ನೀಡುವುದರ ಬಗ್ಗೆ ಚರ್ಚಿಸುತ್ತೇನೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಕಲ್ಪಶ್ರೀ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಐಎಎಸ್, ಐಪಿಎಸ್, ಕೆಎಎಸ್ ಅಂತಹ ಹುದ್ದೆಗಳನ್ನು ಅಲಂಕರಿಸಿದ್ದರೆ ಪತ್ರಿಕೆಗಳ ಜ್ಞಾನದ ಪ್ರಯೋಜನ ಪಡೆದವರಲ್ಲಿ ನಾನೂ ಒಬ್ಬರು. ಅಧಿಕಾರಿಗಳಿಗೆ ತಿಳಿಯದಿರುವ ಜನಸಾಮಾನ್ಯರಿಗೆ ತೊಂದರೆಯಾದ ವಿಚಾರವನ್ನು ಮಾಧ್ಯಮದ ಮುಖಾಂತರ ಪ್ರಕಟಿಸಿ ಎಚ್ಚರಿಸಿ ಸಮಾಜದ ಸರ್ವೋನ್ನತ ಪ್ರಗತಿಗೆ ಮಾಧ್ಯಮದ ಕೊಡುಗೆ ಅಪಾರ. ತಿಪಟೂರಿನ ಪತ್ರಕರ್ತರು ಸಮಸ್ಯೆಗಳನ್ನು ಆಧರಿಸಿ ನೈಜ ವರದಿ ಪ್ರಕಟಿಸುವುದು ತಾಲ್ಲೂಕಿಗೆ ಪ್ರಗತಿಗೆ ಉತ್ತಮವಾಗಿದೆ ಎಂದರು.
ಪೌರಾಯುಕ್ತರಾದ ವಿಶ್ವೇಶ್ವರ ಬದರಗಡೆ ಮಾತನಾಡಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದುವುದು ಪತ್ರಿಕಾ ಧರ್ಮದ ಕೆಲಸವಾಗಿದೆ. ಕನ್ನಡಿಯ ಬಿಂಬದಂತೆ ಪತ್ರಕರ್ತರು ನೈಜ ವೃತ್ತಿ ಮಾಡುತ್ತಿದ್ದಾರೆ, ದೃಶ್ಯ ಮಾಧ್ಯಮ ಟ್ವೆಂಟಿ- ಟ್ವೆಂಟಿ ಕಪ್ ಕ್ರಿಕೆಟ್ ಪಂದ್ಯವಾದರೆ, ಮುದ್ರಣ ಮಾಧ್ಯಮ ರಾಹುಲ್ ದ್ರಾವಿಡ್ ಕ್ರಿಕೆಟ್
ಆಟದಂತೆ ಮನ ಮೆದುಳಿನಲ್ಲಿ ಉಳಿಯುವಂತಿರುತ್ತದೆ ಎಂದು ಮಾತನಾಡಿದರು.
ತಾಲ್ಲೂಕು ದಂಡಾಧಿಕಾರಿ ಪವನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘುರಾಮ್, ಜಿಲ್ಲಾ ಉಪಾಧ್ಯಕ್ಷ ತಿಪಟೂರು ಕೃಷ್ಣ ಮಾತನಾಡಿದರು,
ಕಾರ್ಯಕ್ರಮದಲ್ಲಿ ದಯಾನಂದ್, ಸುಪ್ರತಿಕ್ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷರಾದ ಪ್ರಶಾಂತ್ ಕರಿಕೆರೆ, ಪ್ರಧಾನ ಕಾರ್ಯದರ್ಶಿ ಡಿ ಕುಮಾರ್, ಖಜಾಂಚಿ ಕುಮಾರಸ್ವಾಮಿ ಸೇರಿದಂತೆ ತಾಲ್ಲೂಕು ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರು ಹಾಜರಿದ್ದರು. ಜಿಲ್ಲಾ ನಿರ್ದೇಶಕ ಹಾಲ್ಕರಿಕೆ ಮಂಜುನಾಥ್ ನಿರೂಪಿಸಿ, ಸಿದ್ದೇಶ್ಬ ಸ್ವಾಗತಿಸಿದರು.