ಬೆಂಗಳೂರು, ಜು.3: ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಟೀಕಿಸುವ ಮೂಲಕ ಪ್ರತಿಪಕ್ಷಗಳು ಬಡವರ ಹಸಿವು ಮತ್ತು ಅಗತ್ಯತೆಯನ್ನು ಅಣಕಿಸುತ್ತಿರುವ ಕ್ರಮ ಅತ್ಯಂತ ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಕರ್ನಾಟಕ ಕಾಂಪೋಸ್ಟ್ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಡಾ.ಆನಂದಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರು, ದೀನ ದಲಿತರು, ಶೋಷಿತರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಅನ್ನಭಾಗ್ಯ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಸಾರಿಗೆ, ನಿರುದ್ಯೋಗ ಪದವೀಧರರಿಗೆ ನಿರುದ್ಯೋಗ ಭತ್ಯೆ, ಗೃಹಿಣಿಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಮಹತ್ವದ ಯೋಜನೆಗಳನ್ನು ಸರ್ಕಾರ ಜಾರಿ ಮಾಡಿದೆ.
ಆದರೆ ವಿರೋಧ ಪಕ್ಷ ಬಿಜೆಪಿ ಹಾಗೂ ಬೆಂಬಲಿಗರು ಈ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಅವಹೇಳನ ಮಾಡುತ್ತಿರುವುದು ಜನವಿರೋದಿ ಮತ್ತು ಬಡವಿರೋದಿ ಧೋರಣೆಯಾಗಿದೆ.
ಬಡವರಿಗೆ ಅಕ್ಕಿ ಕೊಟ್ಟರೆ ಅದನ್ನು ಮಾರಿಕೊಳ್ಳುತ್ತಾರೆ. ಹಣ ಕೊಟ್ಟರೆ ಕುಡಿಯುತ್ತಾರೆ, ಜೂಜಾಡುತ್ತಾರೆ ಎಂದು ಅನಗತ್ಯವಾಗಿ ಬಡವರ ಹಸಿವು, ಅನಿವಾರ್ಯತೆಗಳನ್ನು ಅಣಕಿಸಿ ಅಪಹಾಸ್ಯ ಮಾಡುವುದು ಉಳ್ಳವರ ಧೋರಣೆಯಾಗಿದೆ.
ಬಡವರಿಗೆ ಯೋಜನೆಗಳನ್ನು ಇವರು ರೂಪಿಸುವುದೂ ಇಲ್ಲ. ಇಂತಹ ಯೋಜನೆಗಳನ್ನು ಜಾರಿಗೆ ತಂದರೆ ಸಹಿಸುವುದೂ ಇಲ್ಲ.
ಅಕ್ಕಿಗೆ ಬದಲಾಗಿ ಬಡವರ ಖಾತೆಗೆ ಹಣ ಹೋಗುವುದರಿಂದ ಆ ಹಣ ಅವರ ಸಂಕಷ್ಟಕ್ಕೆ ನೆರವಾಗುತ್ತದೆ. ಅವರ ದುಡಿಯುವ ಶಕ್ತಿ ಮತ್ತಷ್ಟು ಹಿಮ್ಮಡಿಯಾಗುತ್ತದೆ. ಬದುಕಿಗೆ ನಿರ್ದಿಷ್ಟ ಆದಾಯದ ಭರವಸೆ ಸಿಕ್ಕರೆ ಅವರು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ದುಡಿಯುವ ವರ್ಗಕ್ಕೆ ಹಸಿವು ಮತ್ತು ಮೂಲಭೂತ ಅಗತ್ಯಗಳನ್ನು ಸರ್ಕಾರ ಸದೃಢಗೊಳಿಸುತ್ತಿರುವುದರಿಂದ ಆರ್ಥಿಕ ಚಟುವಟಿಕೆಗಳೂ ಸಹ ಅಭಿವೃದ್ಧಿಯಾಗುತ್ತದೆ. ಬಡವರ ಬದುಕನ್ನು ಬಲಪಡಿಸುವ ಇಂತಹ ಯೋಜನೆಗಳ ಸಮರ್ಪಕ ಜಾರಿಗೆ ಎಲ್ಲರೂ ಸಹಕರಿಸಬೇಕು.
ಆದರೆ ಪ್ರತಿಪಕ್ಷಗಳು ಹೆಜ್ಜೆಹೆಜ್ಜೆಗೂ ಅಡ್ಡಿಪಡಿಸಲು ಮುಂದಾಗುತ್ತಿದೆ. ಇವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆನಂದಕುಮಾರ್ ಹೇಳಿದರು.
ಸರ್ಕಾರ ಈಗಾಗಲೇ ಜಾರಿಗೊಳಿಸಿರುವ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೃಹಜ್ಯೋತಿ ಯೋಜನೆಗೆ ಲಕ್ಷಾಂತರ ಜನ ನೋಂದಣಿ ಮಾಡಿಸಿಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ. ಈ ಎಲ್ಲಾ ಸರ್ಕಾರದ ಯೋಜನೆಗಳು ಜಾರಿಗೊಂಡು ಸಂಕಷ್ಟ ನಿವಾರಣೆಯಾಗುವುದನ್ನು ಸಹಿಸದ ಪ್ರತಿಪಕ್ಷಗಳ ಪ್ರತಿಭಟನೆಗಳು, ಅನಗತ್ಯ ಟೀಕೆಗಳು ಅನರ್ಥ ಎಂದು ಅವರು ಹೇಳಿದರು.