ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.3: ಬಡಜನರ ಕಲ್ಯಾಣಕ್ಕೆ ಸರ್ಕಾರ ಶ್ರಮಿಸುವುದರ ಜೊತೆಗೆ ಪ್ರಾದೇಶಿಕ ಅಸಮತೋಲನ ನಿವಾರಣೆ, ಭ್ರಷ್ಟಾಚಾರ ಮುಕ್ತ ಆಡಳಿತ, ಎಲ್ಲರಿಗೂ ಸಮಾನ ಸವಲತ್ತುಗಳ ಹಂಚಿಕೆ ಮಾಡಿ ಹೊಸ ಆಡಳಿತ ಮಾದರಿಯನ್ನು ದೇಶಕ್ಕೆ ಪರಿಚಯಿಸಲಿದೆ ಎಂದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
16 ವಿಧಾನಸಭೆಯ ರಾಜ್ಯ ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ಎಲ್ಲ ಪ್ರಯತ್ನ ಮಾಡಲಾಗುವುದು. ಆಡಳಿತವನ್ನು ಪವಿತ್ರ ಕರ್ತವ್ಯವೆಂದು ಪರಿಗಣಿಸುತ್ತದೆ. ಉತ್ತಮ ಆರ್ಥಿಕ ನೀತಿಯೊಂದಿಗೆ ಒಟ್ಟಾರೆ ಆಧುನಿಕ ಕರ್ನಾಟಕ ನಿರ್ಮಾಣ ಸರ್ಕಾರದ ಗುರಿಯಾಗಿದೆ. ಸರ್ಕಾರ ಬಡವರು, ಆರ್ಥಿಕ ಹಿಂದುಳಿದವರ ಪರವಾಗಿ ನಿಲ್ಲುತ್ತದೆ. ಕಲ್ಯಾಣ ಕರ್ನಾಟಕದಲ್ಲಿ ಆರೋಗ್ಯ, ಶಿಕ್ಷಣ ಸೇವೆ ಒದಗಿಸಲು ನೆರವು ನೀಡಲಾಗುವುದು ಎಂದರು.
ಕಳೆದ ಹಲವು ವರ್ಷಗಳಿಂದ ರಾಜ್ಯ ಸರ್ಕಾರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಇನ್ನು ಮುಂದೆ ಆರ್ಥಿಕ ಶಿಸ್ತನ್ನು ಅನುಸರಿಸಿ ರಾಜ್ಯವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ಮೂಲಕ ದೇಶಕ್ಕೆ ಕರ್ನಾಟಕದ ಮಾದರಿಗಳನ್ನು ನಿರ್ಮಿಸಿ ಸಾಬೀತು ಮಾಡಲು ಅಗತ್ಯವಿರುವ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ. ರೈತರ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲಿದ್ದು, ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯವನ್ನು ಸಮಾನ ದೃಷ್ಟಿಯಲ್ಲಿ ಪರಿಗಣಿಸಿ ಆಧುನಿಕ ಕರ್ನಾಟಕವನ್ನು ನಿರ್ಮಾಣ ಮಾಡಲು ಉದ್ದೇಶಿಸಿದೆ ಎಂದು ತಿಳಿಸಿದರು.
ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬದ ಪ್ರತಿ ಸದಸ್ಯರಿಗೆ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿಯನ್ನು ಪ್ರತಿ ತಿಂಗಳು ಉಚಿತವಾಗಿ ನೀಡಲು ತಕ್ಷಣದಿಂದಲೇ ಆರಂಭಿಸಲಾಗುತ್ತಿದೆ. ಈ ಮೂಲಕ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಮೂಲಕ ಹಸಿವು ಮುಕ್ತ ನಾಡನ್ನು ಕಟ್ಟಲು ಸರ್ಕಾರ ಬದ್ಧವಿದೆ ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ಮೂಲಕ ಸರ್ಕಾರ ಹಸಿವು ಮುಕ್ತ ಮಾಡಲಿದೆ. ಬಡವರು, ದುಡಿಯುವ ವರ್ಗದ ಜನರು, ವಲಸೆ ಕಾರ್ಮಿಕರು ಮುಂತಾದವರ ಹಸಿವು ತಣಿಸಲು ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಹಣ ನೀಡಲಾಗುತ್ತದೆ ಎಂದರು.
ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3 ಸಾವಿರ ರೂಪಾಯಿ ಹಣ ನೀಡಲಾಗುತ್ತದೆ. ನಿರುದ್ಯೋಗಿ ಡಿಪ್ಲೋಮಾದಾರರ ಖಾತೆಗೆ ತಿಂಗಳಿಗೆ 1,500 ರೂಪಾಯಿ ಹಾಕಲಾಗುತ್ತದೆ. ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ಗೆ ಉಚಿತ ವಿದ್ಯುತ್ ಕೊಡಲಾಗುತ್ತದೆ. ಈ ಯೋಜನೆಯಿಂದ ಸುಮಾರು 2 ಕೋಟಿ 14 ಲಕ್ಷ ಕುಟುಂಬಗಳಿಗೆ ಅನುಕೂಲ ಆಗಲಿದೆ. ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಹಾಕಲಾಗುತ್ತದೆ ಎಂದರು.
ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಶಾಲಾ ಶಿಕ್ಷಣವು ಸಮಾಜದ ಅಡಿಪಾಯವೆಂದು ಗುರುತಿಸಲ್ಪಟ್ಟಿದೆ. ಪ್ರತಿ ಮಗುವಿನ ಮೂಲಭೂತ ಹಕ್ಕನ್ನು ಸಂರಕ್ಷಿಸಲು ಸರ್ಕಾರ ಬದ್ಧ. ಶಿಕ್ಷಣದ ಜೊತೆಗೆ ಮಕ್ಕಳ ಆರೋಗ್ಯ ರಕ್ಷಣೆಯೂ ಸರ್ಕಾರದ ಜವಾಬ್ದಾರಿ. ಉನ್ನತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಸರ್ಕಾರ ಸಿದ್ಧವಿದೆ. ರಾಜ್ಯದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದ್ದು, ಪದವೀಧರ ನಿರುದ್ಯೋಗಿಗಳಿಗೆ ಪ್ರೋತ್ಸಾಹಧನ ನೀಡುವ ಯೋಜನೆಯಿಂದ ಯುವಜನರಿಗೆ ನೆರವು ಸಿಗಲಿದೆ. ಮಕ್ಕಳ ಆರೋಗ್ಯ ಮತ್ತು ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಲಾಗುವುದು ಎಂದರು.
ಇದಕ್ಕೂ ಮುನ್ನ ಅವರನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಿರಿಯ ಸಚಿವರು ರಾಜ್ಯಪಾಲರನ್ನು ಆತ್ಮೀಯವಾಗಿ ವಿಧಾನಸಭೆಯ ಸಭಾಂಗಣಕ್ಕೆ ಬರಮಾಡಿಕೊಂಡರು.
ಈ ವಿಧಾನಮಂಡಲ ಅಧಿವೇಶನ ಇದೇ 14ರವರೆಗೆ ನಡೆಯಲಿದ್ದು, 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ 2023-24ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಅಧಿವೇಶನದಲ್ಲಿ ಹಲವಾರು ತಿದ್ದುಪಡಿ ವಿಧೇಯಕಗಳನ್ನು ಮಂಡಿಸುವ ಸಾಧ್ಯತೆಯಿದೆ. ಎಪಿಎಂಸಿ ಕಾಯಿದೆ ತಿದ್ದುಪಡಿ ವಿಧೇಯಕ, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ, ಸರ್ಕಾರಿ ವ್ಯಾಜ್ಯಗಳ ನಿರ್ವಹಣೆ ವಿಧೇಯಕ ಹಾಗೂ ಕರ್ನಾಟಕ ಅಗ್ನಿಶಾಮಕ ಮತ್ತು ಸುರಕ್ಷತಾ ತಿದ್ದುಪಡಿ ವಿಧೇಯಕಗಳು ಮಂಡನೆಯಾಗುವ ನಿರೀಕ್ಷೆ ಇದೆ.
ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಬದ್ಧ
ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ನಮ್ಮ ಸರ್ಕಾರ ಸ್ಪಷ್ಟವಾದ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಬದ್ಧವಾಗಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಆರೋಗ್ಯ, ಶಿಕ್ಷಣ ಮತ್ತು ಅಗತ್ಯ ಸೇವೆ ಒದಗಿಸಲು ಬೇಕಾಗುವ ಆರ್ಥಿಕ ಮತ್ತು ಆಡಳಿತಾತ್ಮಕ ನೆರವು ನೀಡಿ ಆ ಭಾಗದ ಅಸಮಾನತೆ ಹೋಗಲಾಡಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಜೊತೆಗೆ ಪ್ರಾದೇಶಿಕ ವೈವಿಧ್ಯಗಳು ಕಾರಣಕ್ಕೆ ಹೆಸರಾಗಿರುವ ಕಲ್ಯಾಣ, ಕಿತ್ತೂರು, ಕರಾವಳಿ, ಮಲೆನಾಡು, ಮೈಸೂರು ಮತ್ತು ಬೆಂಗಳೂರು ಇವುಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅನ್ಯೋನ್ಯತೆ ಉಳಿಸುವುದಾಗಿ ಸಹ ಹೇಳಿದರು.