ಸುದ್ದಿಮೂಲ ವಾರ್ತೆ
ಕುಷ್ಟಗಿ, ಜು. 03:ನಿರ್ಲಕ್ಷ್ಯಕ್ಕೆ ಒಳಗಾದ ಕೆಳ ವರ್ಗದವರ, ಹಿಂದುಳಿದವರ, ಅಸ್ಪೃಶ್ಯರಿಗೆ ಹಡಪದ ಅಪ್ಪಣ್ಣನವರು ರಚಿತ ವಚನಗಳು ಧ್ವನಿಯಾಗಿವೆ ಎಂದು ಡಾ.ಜೀವನಸಾಬ ವಾಲೀಕಾರ್ ಅವರು ಹೇಳಿದರು.
ಪಟ್ಟಣದಲ್ಲಿ ತಾಲೂಕಾಡಳಿತದಿಂದ ಸೋಮವಾರ ಆಯೋಜಿಸಿದ್ದ 889ನೇ ಶಿವಶರಣ ನಿಜಸುಖಿ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಹಡಪದ ಅಪ್ಪಣ್ಣ ಜಾತಿ, ಧರ್ಮ, ವರ್ಣ, ವರ್ಗರಹಿತ ಸಮಾಜ ನಿರ್ಮಾಣಕ್ಕೆ ಮುಂದಾದ ಮಹಾನ್ ವ್ಯಕ್ತಿ. ಅಸ್ಪಶ್ಯತೆ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕೆಲ ಕ್ರಾಂತಿಕಾರಕ ಬದಲಾವಣೆ ತರಲು ಶ್ರಮಿಸಿದವರು. ತಮ್ಮ ವಚನಗಳ ಮೂಲಕವೂ ಉತ್ತಮ ಸಮಾಜ ನಿರ್ಮಿಸಿದ ಸ್ಮರಣೀಯರಾಗಿದ್ದಾರೆ.12ನೇ ಶತಮಾನದಲ್ಲಿ ಬಸವಣ್ಣನವರ ಪರಮಾಪ್ತರಾಗಿ ಕಲ್ಯಾಣ ಕ್ರಾಂತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಡಪದ ಅಪ್ಪಣ್ಣ ಸುಮಾರು 256 ವಚನಗಳನ್ನು, ಅವರ ಧರ್ಮಪತ್ನಿ ಹಡಪದ ಲಿಂಗಮ್ಮ ಸಹ 114 ವಚನಗಳನ್ನು ರಚಿಸಿದ್ದು, ಇವರ ವಚನಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದರು.
ಶಿಕ್ಷಕ ನಟರಾಜ ಸೋನಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯ ಸಾಮಾಜಿಕ, ಶೈಕ್ಷಣಿಕವಾಗಿ ಮುಂದುವರೆಯಲು ತಂದೆ ತಾಯಂದಿರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿಬೇಕು ಎಂದು ಹೇಳಿದರು.
ಈ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ತಾಲೂಕಾಡಳಿತದಿಂದ ಗೌರವಿಸಲಾಯಿತು.
ನಿಡಶೇಸಿ ಪಶ್ಚಕಂತಿ ವ ಗೆಜ್ಜೆಬಾವಿ ಹಿರೇಮಠದ ವಿಶ್ವರಾಧ್ಯ ಶ್ರೀಗಳ ಸಾನ್ನಿಧ್ಯ ಹಾಗೂ ತಹಸೀಲ್ದಾರ್ ರಾಘವೇಂದ್ರರಾವ್ ಕರ್ಣಂ ಅಧ್ಯಕ್ಷತೆ ವಹಿಸಿದ್ದರು. ಚಳಗೇರಾ ಗ್ರಾಪಂ ಅಧ್ಯಕ್ಷ ಮಹಾಂತೇಶ ಹಡಪದ, ದೈಹಿಕ ಶಿಕ್ಷಣ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರ, ಹಡಪದ ಸಮುದಾಯದ ಪ್ರಮುಖರಾದ ದೊಡ್ಡಪ್ಪ ಹೊಸೂರು, ಶಿವಪುತ್ರಪ್ಪ ಹಡಪದ, ರುದ್ರಪ್ಪ ಹಡಪದ, ಶಿವಪ್ಪ ಇಟ್ಟಂಗಿ, ಬಾಳಪ್ಪ ಮನ್ನಾಪುರ, ಮಹಾಂತೇಶ ಅಮರಾವತಿ, ಸಂಗಪ್ಪ ಕಾಟಾಪೂರ, ಯಮನೂರಪ್ಪ ಲಿಂಗದಳ್ಳಿ ಉಪಸ್ಥಿತರಿದ್ದರು.
ಗಮನಸೆಳೆದ ಮೆರವಣಿಗೆ: ಕಾರ್ಯಕ್ರಮಕ್ಕೂ ಮುಂಚೆ ಪಟ್ಟಣದ ಲ್ಲಿ ನಡೆದ ಶರಣ ಹಡಪದ ಅಪ್ಪಣ್ಣನವರ ಜಯಂತಿ ಮೆರವಣಿಗೆ ಸಾರ್ವಜನಿಕರ ಗಮನಸೆಳೆಯಿತು.
ಮಿನಿವಿಧಾನಸೌಧ ಬಳಿ ತಹಸೀಲ್ದಾರ್ ರಾಘವೇಂದ್ರರಾವ್ ಕರ್ಣಂ ಅವರು ಶರಣ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಜಯಂತಿ ಮೆರವಣಿಗೆಗೆ ಚಾಲನೆ ನೀಡಿದರು. ಕಂದಾಯ ಇಲಾಖೆಯ ಶಿರಸ್ತೇದಾರ್ ಸತೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಯಲ್ಲಮ್ಮ, ತೋಟಗಾರಿಕೆ ಇಲಾಖೆಯ ಕಳಕನಗೌಡ ಪೊಲೀಸ್ ಪಾಟೀಲ್, ಶಿಕ್ಷಣ ಇಲಾಖೆಯ ನಾಗಪ್ಪ ಬಿಳಿಯಪ್ಪನವರ ಹಾಗೂ ಹಡಪದ ಸಮುದಾಯದ ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪೂರ್ಣ ಕುಂಭ ಹೊತ್ತ ನೂರಾರು ಮಹಿಳೆಯರು ಮೆರವಣಿಗೆ ಉದ್ದಕ್ಕೂ ಹೆಜ್ಜೆ ಹಾಕಿದರು. ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಪಂ ಮಟ್ಟದ ಕಚೇರಿ, ಶಾಲೆ-ಕಾಲೇಜುಗಳಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಣೆ ನಡೆಯಿತು.