ಸುದ್ದಿಮೂಲ ವಾರ್ತೆ
ಆನೇಕಲ್, ಜು 3 : ತಾಲೂಕಿನ ರಾಮ ಕುಟೀರದಲ್ಲಿ ರೇಣುಕಾರಾಧ್ಯ ಕಲಾವಿದರ ಬಳಗ ಗೆರೆಟಿಗಿನ ಬೆಲೆ ವತಿಯಿಂದ ಗುರುವಂದನ ಮಹೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಗುರು ಪೂರ್ಣಿಮೆ ಅಂಗವಾಗಿ 9 ದಿನಗಳ ಕಾಲ ಗುರುಗಳನ್ನು ಸ್ಮರಣೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ರಾಜ್ಯದ ನಾನಾ ಭಾಗಗಳಲ್ಲಿ ಆಗಮಿಸಿದ್ದ ರಂಗಭೂಮಿ ಕಲಾವಿದರು ಹಾಗೂ ರಂಗ ನಿರ್ದೇಶಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಗುರುಪೂರ್ಣಿಮೆ ಅಂಗವಾಗಿ ಪೌರಾಣಿಕ ನಾಟಕವನ್ನು ಪ್ರದರ್ಶನ ಏರ್ಪಡಿಸಲಾಗಿತ್ತು.
ಶಾಸಕ ಶಿವಣ್ಣ ಮಾತನಾಡಿ, ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ತಾಲೂಕಿನ ಅಂಬೇಡ್ಕರ್ ಭವನವನ್ನು ಶೀಘ್ರವೇ ಬಳಸಿಕೊಳ್ಳುವ ಹಾಗೇ ಮಾಡಲಾಗುವುದು ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಪದ್ಮನಾಭ ಮಾತನಾಡಿ, ರಂಗಭೂಮಿ ಕಲಾವಿದರಿಗೆ ಗೌರವಿಸುತ್ತಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲೂ ಇದು ಮುಂದುವರೆಯಲಿ ಎಂದರು.
ರೇಣುಕಾರಾಧ್ಯ ಅವರು ಮಾತನಾಡಿ, ನಮ್ಮ ಹಳ್ಳಿಗಳು ಗಡಿ ಭಾಗದಲ್ಲಿ ಇರುವುದರಿಂದ ಇಲ್ಲಿ ಪೌರಾಣಿಕ ನಾಟಕಗಳನ್ನು ಪ್ರದರ್ಶಿಸುವವರು ಕಡಿಮೆಯಾಗಿದ್ದಾರೆ. ಅಂತಹವರನ್ನು ಗುರುತಿಸಿ, ಕಲೆಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸಬೇಕು ಎಂದರು.
ರೈನ್ಬೋ ಶಾಲೆಯ ಮುಖ್ಯ ಕಾರ್ಯದರ್ಶಿ ವಿಜಯಕುಮಾರ್ ಗೌಡ ಡಾ ರಾಜೇಶ್ವರ್ ಶಿವಾಚಾರ್ಯ ಸ್ವಾಮಿಗಳು, ರಾಜಪುರ ಮಠ ಶಿವಾನಂದ ಮಹಾಸ್ವಾಮಿಗಳು, ತಾಲೂಕಿನ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ ಚಂದ್ರಶೇಖರ್ ರೇಣುಕಾರಧ್ಯ, ಪಾಪಣ್ಣ ಗೌಡ, ಉಪೇಂದ್ರ ಗೌಡ, ಮಾದೇಶ್ ಗೌಡ, ನವಕುಮಾರ್, ಮುನಿರಾಜು ಇನ್ನಿತರರು ಭಾಗಿಯಾಗಿದ್ದರು