ಬೆಂಗಳೂರು ಜುಲೈ 03: ಇಂದಿನ ಕಾಲದಲ್ಲಿ ಪ್ರಸ್ತುತ ವಾಗಿರಲು ನಿರಂತರ ಜ್ಞಾನಾರ್ಜನೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದ ನಂತರವೂ ಬೇರೆ ಬೇರೆ ಮಾಧ್ಯಮಗಳ ಮೂಲಕ ಜ್ಞಾನಾರ್ಜನೆಯನ್ನ ಬೆಳೆಸಿಕೊಳ್ಳಬೇಕು ಎಂದು ಖ್ಯಾತ ನಟ ರಮೇಶ್ ಅರವಿಂದ್ ಕರೆ ನೀಡಿದರು.
ಇಂದು ಬಸವನಗುಡಿಯ ನ್ಯಾಷನಲ್ ಕಾಲೇಜಿನ 60 ನೆ ಅಂತರ್ ವರ್ಗೀಯ ಕನ್ನಡ ನಾಟಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ತಮ್ಮ ಕಾಲೇಜಿನ ಜೀವನವನ್ನು ಮೆಲಕು ಹಾಕಿದ ಅವರು, ತಾವು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮಾಡಿದ ಆಟಾಟೋಪ ಗಳನ್ನು ಪ್ರಸ್ತಾಪಿಸಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು. ಕಾಲೇಜಿನ ಸಹಪಾಠಿಗಳು ನಮ್ಮ ಜೀವನದ ಪ್ರಮುಖ ವ್ಯಕ್ತಿಗಳು. ಇಂದು ನಾನು ಕಾಲೇಜಿನ ಸಹಪಾಠಿಯನ್ನೆ ಜೀವನ ಸಂಗಾತಿಯಾಗಿ ಪಡೆದಿದ್ದೇನೆ. ಕಾಲೇಜಿನ ಹಿರಿಯ ವಿದ್ಯಾರ್ಥಿಯ ಜೊತೆಗೂಡಿ ಸೂಪರ್ ಹಿಟ್ ಚಲನಚಿತ್ರ ನಿರ್ಮಿಸಿದ್ದೇನೆ. ನಮ್ಮ ಜೊತೆಯಲ್ಲಿ ತಮಾಷೆ ಮಾಡುತ್ತಾ ಕುಳಿತಿರುವ ವ್ಯಕ್ತಿ ಮುಂದೆ ಅತ್ಯುನ್ನತ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಕಾಲೇಜಿನ ಜೀವನ ಅತ್ಯಂತ ಸುಂದರ ಜೀವನ, ಅದನ್ನು ಎಂಜಾಯ್ ಮಾಡುತ್ತಲೇ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ವೇದಿಕೆಯೇ ನನ್ನ ಮೊದಲ ನಟನೆಯ ಪಾಠಶಾಲೆ. ಈ ವೇದಿಕೆಯಲ್ಲಿ ಕಲಿತಂತಹ ನಟನೆ ಇಂದು ನನ್ನ ಸಾಧನೆಗೆ ಮೂಲ ಕಾರಣ. ಇಂದು ವಿವಿಧ ನಾಟಕಗಳಲ್ಲಿ ಅಭಿನಯಿಸಿರುವ, ಅದನ್ನ ನಿರ್ಮಿಸಿ ನಿರ್ದೇಶಿಸಿರುವ ಯುವ ಪ್ರತಿಭೆಗಳಿಗೆ ದೊಡ್ಡ ಅವಕಾಶ ದೊರೆಯುವುದು ಖಂಡಿತ ಎಂದರು.
ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದ ಅವರು, ಕಾಲೇಜಿನ ನಂತರ ನಮ್ಮ ಕಲಿಕೆ ಕೊನೆಯಾಗಬಾರದು. ಕಲಿಕೆ ನಿರಂತರವಾಗಿ ಇರಬೇಕು. ಅದರಿಂದಲೇ ನಾವು ಆಯಾ ಕಾಲಘಟ್ಟದಲ್ಲಿ ಪ್ರಸ್ತುತ ವಾಗಿ ಇರುತ್ತೇವೆ. ಇದಕ್ಕೆ ಪುಸ್ತಕಗಳ ಪಠಣ, ಅದು ಸಾಧ್ಯ ವಾಗಿದೆ ಇದ್ದಲ್ಲಿ ಬೇರೆ ಬೇರೆ ಮಾಧ್ಯಮಗಳ ಮೂಲಕ ಜ್ಞಾನಾರ್ಜನೆಯನ್ನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಲೇಜಿನ ಸುಮಾರು 109 ಕ್ಕು ಹೆಚ್ಚು ವಿದ್ಯಾರ್ಥಿಗಳು 14 ನಾಟಕಗಳನ್ನು ಈ ಸ್ಫರ್ಧೆಯಲ್ಲಿ ಪ್ರದರ್ಶಿಸಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ, ಎನ್. ಇ .ಎಸ್ ಸಂಸ್ಥೆಗಳ ಅಧ್ಯಕ್ಷರಾದ ಡಾ ಎಚ್.ಎನ್. ಸುಬ್ರಮಣ್ಯ, ಗೌರವ ಕಾರ್ಯದರ್ಶಿಗಳಾದ ವಿ.ವೆಂಕಟ ಶಿವಾರೆಡ್ಡಿ, ಬಿ.ಎಸ್. ಅರುಣ್ ಕುಮಾರ್, ಜಂಟಿ ಕಾರ್ಯದರ್ಶಿ ಸುಧಾಕರ್, ನ್ಯಾಷನಲ್ ಕಾಲೇಜು ಜಯನಗರದ ಚೇರ್ಮನ್ ವೆಂಕಟ ರಾಮ ರೆಡ್ಡಿ, ಖ್ಯಾತ ರಂಗಕರ್ಮಿ ಗಳಾದ, ಕಲಾ ಗಂಗೋತ್ರಿ ಕಿಟ್ಟಿ, ರಘು ಟಿ, ಛಾಯಾ ಭಾರ್ಗವಿ ಎಸ್. ಹೇಚ್ ಉಪಸ್ಥಿತರಿದ್ದರು.