ಕಲಬುರಗಿ, ಜು.4 : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆ ರದ್ದು ಮಾಡಲು ಮುಂದಾಗಿರುವುದು ಖಂಡನಿಯ, ಸರ್ಕಾರ ಎರಡು ಕಾಯ್ದೆಗಳನ್ನು ನಿಷೇಧ ಮಾಡುವುದು ಕೈಬಿಡಬೇಕು ಎಂದು ಕಡಗಂಚಿಯ ಶಾಂತಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶ್ರೀಗಳು ಮಾತನಾಡಿದರು, ಗೋ ದೇವರು, ಹಿಂದೂ ಧರ್ಮದಲ್ಲಿ ಗೋವಿನ ಪೂಜೆ ಮಾಡಲಾಗುತ್ತದೆ. ಇಂತಹ ಗೋಮಾತೆಯನ್ನು ಹತ್ಯೆ ಮಾಡುವುದು ಸರಿಯಲ್ಲ ಎಂದರು.
ಮಾಶಾಳ ಸಿದ್ದಲಿಂಗೇಶ್ವರ ಸಂಸ್ಥಾ ಹಿರೇಮಠದ ಶ್ರೀ ಕೇದಾರ ಶ್ರೀಗಳು ಮಾತನಾಡಿ, ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುವುದನ್ನು ಕೈ ಬಿಡಬೇಕು. ಕೈ ಬಿಡದಿದ್ದರೆ ರಾಜ್ಯದ ಎಲ್ಲ ಮಠಾಧೀಶರು ಸೇರಿಕೊಂಡು ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮಿ ಶಕ್ತಿ ಪೀಠದ ಡಾ. ಅಪ್ಪಾರಾವ ದೇವಿ ಮುತ್ಯಾ, ವಿಶ್ವ ಹಿಂದೂ ಪರಿಷತ್ ಮುಖಂಡರಾದ ಲಿಂಗರಾಜ ಅಪ್ಪ ಅವರು ಮಾತನಾಡಿದರು.
ಸಿದ್ದರಾಮ ಶ್ರೀಗಳು, ಅಲ್ಲಂಪ್ರಭು ಸ್ವಾಮೀಜಿ, ಗುರುನಾಥ್ ಮಹಾಸ್ವಾಮಿಗಳು, ಚರಲಿಂಗ ಮಹಾಸ್ವಾಮಿಗಳು ಹಾಗೂ ಹಿಂದೂ ಜಾಗೃತಿ ಸೇನೆಯ ಲಕ್ಷ್ಮಿಕಾಂತ ಸ್ವಾಧಿ, ಶಂಕರ್ ಚೊಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.