ಸುದ್ದಿಮೂಲ ವಾರ್ತೆ
ಹೊಸಕೋಟೆ, ಜು 4 : ನಗರದ 28 ನೇ ವಾರ್ಡ್ ನಲ್ಲಿರುವ ರಾಜಕಾಲುವೆ ಒತ್ತುವರಿ ಜಾಗ ತೆರವು ಮಾಡಿ ಸರಾಗವಾಗಿ ಮೋರಿ ನೀರು ಹರಿಸುವ ಸಲುವಾಗಿ ಒತ್ತುವರಿ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ, ನಗರಸಭೆ ಹಾಗೂ ಪೊಲೀಸರು ಆಗಮಿಸಿ, ತೆರವಿನ ಜಾಗದಲ್ಲಿ ಹೈಡ್ರಾಮ ಸೃಷ್ಟಿಮಾಡಿ ಒತ್ತುವರಿದಾರರು ಕಾನೂನು ಪ್ರಶ್ನಿಸಿದ ಪ್ರಸಂಗ ನೆಡೆಯಿತು.
ನಗರ ಸಭೆ ಇಂಜಿನಿಯರ್ಗಳು ಜೆಸಿಬಿ ಸಮೇತ ಒತ್ತುವರಿ ತೆರವು ಮಾಡಲು ಕಂದಾಯ ಇಲಾಖೆಯ ಆದೇಶ ಪತ್ರದೊಂದಿಗೆ ಆಗಮಿಸಿದ್ದರು. ತೆರವಿಗೆ ಅಕ್ರಮ ಒತ್ತುವರಿದಾರ ಕೆ.ಎಂ ಚೌಡೇಗೌಡ ಹಾಗೂ ಅವರ ಪತ್ನಿ ಅಡ್ಡಿಪಡಿಸಿದರು. ಒತ್ತುವರಿ ತೆರವಿಗೆ ಅಧಿಕಾರಿಗಳು ನೀಡಿರುವ ದಾಖಲೆ ನೋಡಿದ ನಂತರವೂ ಅಡ್ಡಿಪಡಿಸಿದ್ದು ತಾಲೂಕಿನಲ್ಲಿ ಆಗಿರುವ ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸಿ ನಂತರ ನಾನೂ ಸಹ ಮಾಡಿರುವ ಒತ್ತುವರಿಯನ್ನು ಅಧಿಕಾರಿಗಳು ತೆರವು ಮಾಡಲು ಸಹಕಾರ ನೀಡುತ್ತೇನೆ ಎಂದು ಅಧಿಕಾರಿಗಳ ತೆರವಿಗೆ ಅಡ್ಡಿ ಪಡಿಸಿದರು. ಕೂಡಲೇ ಪೊಲೀಸರ ಮಧ್ಯ ಪ್ರವೇಶದಿಂದ ಒತ್ತುವರಿ ಪ್ರದೇಶದ ಭಾಗವನ್ನು ತೆರವು ಮಾಡಲು ಅನುವು ಮಾಡಿಕೊಡಲಾಯಿತು.
ಕಂದಾಯಾಧಿಕಾರಿ ಆಂಜಿನಮ್ಮ ಮಾತನಾಡಿ, ತೆರವು ಬಗ್ಗೆ ನಮಗೆ ಬಂದಿರುವ ದೂರಿನಬಗ್ಗೆ ಮೇಲದಿಕಾರಿಗಳ ವರದಿಯಂತೆ ಕಾರ್ಯ ನಿರ್ವಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ ಎಂದರು.